ಗದಗ : ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ವಿದ್ಯಾರ್ಥಿಯ ತಲೆ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಬಸ್ ಹತ್ತುವಾಗ ಕಾಲು ಜಾರಿ ಬಿದ್ದ ಪರಿಣಾಮ ತಲೆ ಮೇಲೆ ಬಸ್ ಹರಿದು ವಿದ್ಯಾರ್ಥಿ ರಾಘವೇಂದ್ರ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಳಗಾವಿ ಜಿಲ್ಲೆಯ ರಾಮದುರ್ಗದಿಂದ ಕೊಣ್ಣೂರ, ನರಗುಂದ, ಗದಗ ಮಾರ್ಗವಾಗಿ ಹೊಸಪೇಟೆಗೆ ಹೊರಟಿದ್ದ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಬಸ್ ಪೂರ್ತಿ ಪ್ರಯಾಣಿಕರು ತುಂಬಿದ್ದರಿಂದ ರಾಘವೇಂದ್ರ ಬಸ್ಸಿನ ಮುಂದಿನ ಬಾಗಿಲಲ್ಲಿ ನಿಂತಿದ್ದ. ಬಸ್ ಕೊಣ್ಣೂರ ನಿಲ್ದಾಣದಿಂದ ಹೊರಡುವ ವೇಳೆ ತಿರುವಿನಲ್ಲಿ ಆಯಾತಪ್ಪಿ ವಿದ್ಯಾರ್ಥಿ ರಾಘವೇಂದ್ರ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬಸ್ಸಿನ ಹಿಂದಿನ ಚಕ್ರಗಳಿಗೆ ವಿದ್ಯಾರ್ಥಿ ಸಿಲುಕಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.