ಗದಗ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ವತಿಯಿಂದ ನಗರದ ಜಿಪಂ ಕಚೇರಿ ಆವರಣದಲ್ಲಿ ಸೇವೆ ಸ್ಥಗಿತಗೊಳಿಸಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ಪೂಜಾರ ಮಾತನಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿ ತಯಾರಿಕೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಬಡ್ತಿ, ಗ್ರಾಮ ಪಂಚಾಯಿತಿಗಳ ಗ್ರೇಡ್‍ಗಳನ್ನು ಹೆಚ್ಚಿಸುವುದು, ಬಡ್ತಿಯಲ್ಲಿನ ಸಮಸ್ಯೆ ನಿವಾರಣೆ, ಹೊಸ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಗಿದೆ’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಡಾಟಾ ಎಂಟ್ರಿ ಅಪರೇಟರ್‌ಗಳು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಸಹಯೋಗದೊಂದಿಗೆ ನಗರದ ಜಿಲ್ಲಾಡಳಿತ ಭವನದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ನಾವು ಎರಡು ದಿನ ಪಾಲ್ಗೊಂಡು ಬಂದಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಯಲಿದೆ. ಗ್ರಾಮ ಪಂಚಾಯಿತಿಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಇತರೆ ಸೇವೆಗಳು ಸ್ಥಗಿತಗೊಂಡಿವೆ’ ಎಂದು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೆ ಹೆಚ್ಚಿಸುವಂತೆ ಹಲವು ವರ್ಷಗಳ ಬೇಡಿಕೆ ಇದ್ದರೂ ಅದನ್ನು ಪರಿಗಣಿಸಿಲ್ಲ. ಅಲ್ಲದೇ, ಪ್ರಸ್ತುತ ಇರುವ 6,021 ಹುದ್ದೆಗಳಲ್ಲಿಯೇ 1,500 ಹುದ್ದೆಗಳನ್ನು ಕಡಿಮೆ ಮಾಡಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ನಿಯಮಬಾಹಿರವಾಗಿ ಸೃಷ್ಟಿಸಲಾಗಿದೆ. ಮೂಲ ಆಶಯವನ್ನು ಅರಿಯದೇ ಪಿಡಿಒಗಳಿಗೆ ಅನ್ಯಾಯ ಮಾಡಿದೆ’ ಎಂದು ಹರಿಹಾಯ್ದರು.
ವರ್ಗಾವಣೆ ಕೌನ್ಸೆಲಿಂಗ್ ಪದ್ಧತಿಯಲ್ಲೂ ಹಲವು ಲೋಪದೋಷಗಳಿವೆ. ಇಲಾಖೆಯ ಶೋಷಣೆಯಿಂದ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 21 ಪಿಡಿಒಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕೌಟುಂಬಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ’ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ.
ಎಸ್‍ಡಿಎಎ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹಾಂತೇಶ ಖೋತ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಗದಗ ಜಿಲ್ಲಾ ಘಟಕದ ಉಪಾಧ್ಯಕ್ಷೆ ಅಶ್ವಿನಿ ಕುರಡಗಿ, ಮಹಾಂತೇಶ ತಳವಾರ, ಸವಿತಾ ಸೋಮಣ್ಣವರ, ಶೀವಲೀಲಾ ಗೂಳಪ್ಪನವರ, ಮಾಲತೇಶ ಮೇವುಂಡಿ, ಸಂತೋಷ ಹೂಗಾರ, ಜ್ಯೋತ್ಸ್ನಾ ಸಿ.ಎಚ್., ಮಂಜುನಾಥ ಗಣಿ, ಲೋಹಿತ್ ಎಂ., ಎಸ್.ವೈ. ಕುಂಬಾರ, ವಸಂತ ಗೋಕಾಕ, ಫಕ್ರುದ್ದೀನ ನದಾಫ, ಪ್ರದೀಪ ಆಲೂರ ಸೇರಿದಂತೆ ಹಲವರು ಇದ್ದರು.