ಗದಗ ಜುಲೈ 11: ಹುಲಕೋಟಿ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಜ್ಞಾನ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ದ್ವೈಮಾಸಿಕ ಕಾರ್ಯಾಗಾರವನ್ನು ಆರ್.ಬಿ.ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕರು, ಎ.ಇ.ಇ.ಸಿ., ವಿಜಯಪುರ ಇವರು ಉದ್ಘಾಟಿಸಿದರು.
ಜಂಟಿ ಕೃಷಿ ನಿರ್ದೇಶಕರಾದ ಜಿ.ಎಚ್. ತಾರಾಮಣಿ ಅವರು ಮಾತನಾಡಿ ಜಿಲ್ಲೆಯ ಮಳೆ ಬೆಳೆ ಪರಿಸ್ಥಿತಿ, ವಾತಾವರಣ, ಬೆಳೆಗಳಿಗೆ ತಗಲುವ ಕೀಟ/ರೋಗ ಬಾಧೆ ಇತ್ಯಾದಿಗಳ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಿ ಮಾಹಿತಿ ನೀಡಲಾಗುತ್ತಿದೆ. ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ಸಕಾಲದಲ್ಲಿ ರೈತರಿಗೆ ಪರಿಕರಗಳನ್ನು ಪೂರೈಸುವುದು, ವಿವಿಧ ಪರಿಕರಗಳ ಗುಣಮಟ್ಟ ಕಾಪಾಡಲು ಗುಣನಿಯಂತ್ರಣ ಅಭಿಯಾನ ಕೈಗೊಳ್ಳುವುದು, ಸಮಸ್ಯಾತ್ಮಕ ಕ್ಷೇತ್ರಗಳಿಗೆ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಪರಿಹಾರ ಒದಗಿಸುವುದು, ಒಟ್ಟಾರೆಯಾಗಿ ರೈತರ ನೆರವಿಗೆ ಇಲಾಖೆ ಸದಾ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಉಪ ಕೃಷಿ ನಿರ್ದೇಶಕರು ಗದಗ/ರೋಣ, ಜಿಲ್ಲೆಯ ಎಲ್ಲ ಸಹಾಯಕ ಕೃಷಿ ನಿರ್ದೇಶಕರು ಹಾಗೂ ತಾಂತ್ರಿಕ ಸಿಬ್ಬಂದಿಯು ಸಕಾಲದಲ್ಲಿ ರೈತರಿಗೆ ಕೃಷಿ ಪರಿಕರಗಳು, ಉಪಕರಣಗಳು ದೊರೆಯುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು. ಅಲ್ಲದೇ, ಬೆಳೆಗಳಿಗೆ ಬರುವ ಕೀಟ/ರೋಗಗಳ ನಿರ್ವಹಣೆ ಕುರಿತು ಮತ್ತು ನೂತನ ಕೃಷಿ ತಾಂತ್ರಿಕತೆಗಳ ಕುರಿತು ಸಕಾಲಕ್ಕೆ ರೈತರಿಗೆ ತಿಳಿಸಬೇಕು ಎಂದು ನಿರ್ದೇಶಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಜ್ಞಾನಿಯಾದ ಡಾ ಮೊಟಗಿ ಇವರು ಹೆಸರು, ತೊಗರಿ, ಸೂರ್ಯಕಾಂತಿ, ಮತ್ತಿತರೆ ಬೆಳೆಗಳ ಸುಧಾರಿತ, ರೋಗ/ಕೀಟ ನಿರೋಧಕ ಶಕ್ತಿಯನ್ನು ಹೊಂದಿದ ಹಾಗೂ ನವೀನ ತಳಿಗಳ ಕುರಿತು ಮಾಹಿತಿ ನೀಡಿದರು.
ಒಣ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕೃಷಿ ತಾಂತ್ರಿಕತೆಗಳ ಕುರಿತು ಡಾ ಎಂ.ಪಿ.ಪೋತ್ದಾರ ಹಾಗೂ ಈ ಭಾಗದಲ್ಲಿ ಬೆಳೆದಿರುವ ಬೆಳೆಗೆ ಬರುವ ರೋಗಗಳ ನಿರ್ವಹಣಾ ಕ್ರಮಗಳ ಕುರಿತು ಡಾ ಶಿವಲಿಂಗಪ್ಪ ಹೋಟಕರ ಚರ್ಚಿಸಿದರು. ಜಿಲ್ಲೆಯ ಬೆಳೆಗಳಲ್ಲಿ ಕಂಡುಬರುವ ಕೀಟಗಳ ನಿರ್ವಹಣೆ ಕುರಿತು ಡಾಸಿ.ಎಂ.ರಫಿ ತಿಳಿಸಿದರು. ವಿವಿಧ ಬೆಳೆಗಳಲ್ಲಿ ಕ್ಷೇತ್ರ ಪ್ರಯೋಗಗಳನ್ನು ಕೈಗೊಂಡಿರುವ ಕುರಿತು ಚರ್ಚಿಸಲಾಯಿತು.
ಕೃಷಿ ವಿಜ್ಞಾನಿಗಳಾದ ಡಾಎಸ್.ಎಲ್.ಪಾಟೀಲ, ಡಾಶ್ರೀಮತಿ ಹೇಮಾವತಿ ಹಿರೇಗೌಡರ, ಡಾಎನ್.ಎಚ್,ಬಂಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಸುಧಾ ಮಂಕಣಿ ಹಾಗೂ ಜಿಲ್ಲೆಯ ಉಪ ಕೃಷಿ ನಿರ್ದೇಶಕರು ಗದಗ/ರೋಣ, ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿಗಳು ಮತ್ತು ಎಲ್ಲ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು, ಆತ್ಮಾ ಸಿಬ್ಬಂದಿ ಹಾಗೂ ಕೃಷಿ ಸಂಜೀವಿನಿಯ ತಾಂತ್ರಿಕ ಸಹಾಯಕರು ಹಾಜರಿದ್ದರು.