15.7 C
New York
Friday, May 9, 2025

Buy now

spot_img

ಗದಗ : ಪಿಂಜಾರ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಲಿ: ಎಚ್.ಕೆ. ಪಾಟೀಲ

ನದಾಫ/ಪಿಂಜಾರ ಸಮಾಜದ ಸಮಾವೇಶ, ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ

ಗದಗ (ಆರ್.ಆರ್.ಸಿದ್ನೆಕೊಪ್ಪ, ಐ.ಡಿ.ನದಾಫ್ ವೇದಿಕೆ): ‘ಪಿಂಜಾರ ಸಮಾಜದ ಇತಿಹಾಸದಲ್ಲೇ ಅತಿ ಹೆಚ್ಚು ಜನರು ಒಂದೇ ಕಡೆ ಸೇರಿರುವ ಸಮಾವೇಶ ಇದು. ಸಮಾಜದ ಸಂಘಟನೆಗೆ ಶ್ರಮಿಸಿದ ಇಬ್ರಾಹಿಂ ಸಾಹೇಬರು ಮತ್ತು ಆರ್.ಆರ್. ಸಿದ್ನೆಕೊಪ್ಪ ಅವರಿಗೆ ತುಂಬ ಖುಷಿ ಕೊಡುವ ಸಂಗತಿ ಇದಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದ ಆಂಗ್ಲೋ ಉರ್ದು ಶಾಲಾ ಮೈದಾನದಲ್ಲಿ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ವತಿಯಿಂದ ಶನಿವಾರ ನಡೆದ 32 ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ರಾಜ್ಯ ಮಟ್ಟದ ಮಹಿಳಾ ಸಮಾವೇಶ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಪಿಂಜಾರ ಸಮಾಜ ರಾಜಕೀಯವಾಗಿ, ಆಡಳಿತಾತ್ಮಕವಾಗಿ ದೊಡ್ಡದಿದೆ. ಸಮಾಜದ ಸಾಕಷ್ಟು ಜನರು ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ’ ಎಂದು ಹೇಳಿದರು.

ಪಿಂಜಾರ ಸಮಾಜದವರು ರೈತರಂತೆ ಮುಗ್ಧರು. ತಮಗೆ ಬೇಕಾಗಿರುವುದನ್ನು ಕಸಿದುಕೊಳ್ಳುವ ಮನೋಭಾವ ಇಲ್ಲದವರು. ಆದರೆ, ಹೋರಾಟದ ಮೂಲಕ ಪಡೆದುಕೊಳ್ಳಲು ಮುಂದಾಗಬೇಕಿದೆ’ ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೊರತುಪಡಿಸಿದರೆ ಪಿಂಜಾರ ಸಮುದಾಯ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಇರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತೇವೆ ಎಂಬ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

‘ಒಗ್ಗಟ್ಟು ಸಂಘಟನೆಯ ಬಲ. ಈ ಬಲದಿಂದ ಸರ್ಕಾರವನ್ನು ಅಲುಗಾಡಿಸಿ ನ್ಯಾಯಯುತ ಬೇಡಿಕೆಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಡಿಸೆಂಬರ್‌ ನಲ್ಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸಮಾಜದ ನಿಯೋಗವನ್ನು ಮುಖ್ಯಮಂತ್ರಿಗಳ ಜತೆಗೆ ಭೇಟಿ ಮಾಡಿಸಿ, ಸಮಾಜದ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ತಿಳಿಸಿದರು.

ಕರ್ನಾಟಕ ನದಾಫ್, ಪಿಂಜಾರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್. ಜಲೀಲ ಸಾಬ್ ಮಾತನಾಡಿ, ‘ಪಿಂಜಾರರು ಅರೆ ಅಲೆಮಾರಿಗಳು. ಹಾಗಾಗಿ, ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಇತರೆ ಮಕ್ಕಳ ಜತೆಗೆ ಸ್ಪರ್ಧಿಸಲೂ ಸಾಧ್ಯವಾಗದೇ ಇರುವ ಕಾರಣ ಉನ್ನತ ಹುದ್ದೆಗಳು ಇಂದಿಗೂ ನಮಗೆ ಮರೀಚಿಕೆಯಾಗಿವೆ’ ಎಂದು ಹೇಳಿದರು.

ಅಲ್ಪಸಂಖ್ಯಾತರ ಶಾಲೆಗಳಲ್ಲಿ ಪಿಂಜಾರ ಸಮಾಜ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಮೀಸಲಾತಿ ಕಲ್ಪಿಸಬೇಕು. ಕೇಂದ್ರ ಒಬಿಸಿ ಪಟ್ಟಿಯಲ್ಲಿ ಶೇ 2ರಷ್ಟು ಒಳಮೀಸಲಾತಿ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಸಮಾಜಕ್ಕೆ ಕೆಟಗರಿ 1 ರಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಪ್ರಮಾಣಪತ್ರ ನೀಡಲು ಅಧಿಕಾರಿಗಳು ಸಿಗಲಾರದಂತಹ ದಾಖಲೆ ಪತ್ರಗಳನ್ನು ಕೇಳುತ್ತಿದ್ದಾರೆ. ಇನ್ನು ನಾವು 2 ಬಿಯಲ್ಲಿ ಅವಕಾಶ ಪಡೆದುಕೊಂಡರೆ ಮುಸ್ಲಿಂ ಸಮಾಜದವರೇ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಏನು ಮಾಡುವುದೆಂದು ತೋಚದೆ ನಮ್ಮ ಮಕ್ಕಳು ಚಿಂತಿತರಾಗಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ವಕ್ಫ್ಗೆ ಸೇರಿದ ಸಾಕಷ್ಟು ಆಸ್ತಿಗಳು ಖಾಲಿ ಬಿದ್ದಿವೆ. ಮುಸ್ಲಿಂ ಸಮಾಜದ ಮಾಲೀಕತ್ವದಲ್ಲೇ ಇರುವ ಆ ಎಂದು ಆಸ್ತಿಗಳನ್ನು ನಮಗೆ ಗುತ್ತಿಗೆ ರೂಪದಲ್ಲಿ ಒದಗಿಸಿದರೆ ಅಲ್ಲಿ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ನೆರವಾಗುವಂತಹ ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕೆ ಸರ್ಕಾರ ಮತ್ತು ವಕ್ಫ್ ಮಂಡಳಿ ನೆರವಾಗಬೇಕು. ಸ್ಥಳೀಯ ಸಂಸ್ಥೆಗಳಿಗೆ ಪಿಂಜಾರ ಸಮಾಜದವರ ನಾಮನಿರ್ದೇಶನ, ವಿಧಾನ ಪರಿಷತ್‌ಗೆ ಆಯ್ಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ಒಗ್ಗಟ್ಟಿನಲ್ಲಿ ಬಲವಿದೆ. ಶಕ್ತಿ ಇದ್ದಲ್ಲಿ ಯಶಸ್ಸು ಸಿಗುತ್ತದೆ. ಪಿಂಜಾರ ಸಮಾಜದವರು ಒಗ್ಗಟ್ಟು ಪ್ರದರ್ಶನದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು’ ಎಂದರು.

‘ಹಿಂದಿನ ಬಿಜೆಪಿ ಸರ್ಕಾರ ಪಿಂಜಾರ ಸಮಾಜಕ್ಕೆ ಪ್ರವರ್ಗ–1ರ ಸೌಲಭ್ಯ ಒದಗಿಸಿತ್ತು. ಆದರೆ, ಅಧಿಕಾರಿ ವರ್ಗ ಪ್ರಮಾಣಪತ್ರ ಕೊಡುತ್ತಿಲ್ಲ. ಇದರಿಂದಾಗಿ, ಸಮಾಜದ ವಿದ್ಯಾರ್ಥಿಗಳು ವೈದ್ಯಕೀಯ ಸೇರಿದಂತೆ ಉನ್ನತ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಲು ಸರ್ಕಾರ ಕ್ರಮವಹಿಸಬೇಕು’ ಎಂದರು.

ನದಾಫ್, ಪಿಂಜಾರ ನಿಗಮ ಆಗಿದೆ. ಅದಕ್ಕೆ ಬಜೆಟ್‌ನಲ್ಲಿ ಹಣ ನಿಗದಿ ಆಗಿಲ್ಲ. ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಕ್ರಮವಹಿಸಬೇಕು. ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಶಿಕ್ಷಣದ ಮೂಲಕ ಹೋರಾಟದ ನಡೆಸಿದರೆ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದರು.

ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ನದಾಫ್, ಪಿಂಜಾರ ಸಮಾಜದವರೊಂದಿಗೆ ನಾವು ಹಿಂದಿನಿಂದಲೂ ಅನ್ಯೋನ್ಯದಿಂದ ಬದುಕಿದ್ದೇವೆ. ನಾವು ಯಾವತ್ತಿಗೂ ನಿಮ್ಮನ್ನು ಬೇರೆಯಾಗಿ ಕಂಡಿಲ್ಲ. ಸಾಧ್ಯ ಇರುವಾಗಲೆಲ್ಲಾ ರಾಜಕೀಯ ಪ್ರಾತಿನಿಧ್ಯ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಲಿಂಗಾಯತರಲ್ಲೂ ಹಲವು ಒಳಪಂಗಡಗಳಿವೆ. ಪ್ರತಿಯೊಬ್ಬರೂ ಒಳಮೀಸಲಾತಿ ಕೇಳುತ್ತಿದ್ದಾರೆ.. ಜಾತಿ ವ್ಯವಸ್ಥೆಯಲ್ಲಿ ಇಂತಹ ಕೆಲವೊಂದು ಸಂಗತಿಗಳು ಸಹಜವಾಗಿ ನಡೆಯುತ್ತಿರುತ್ತವೆ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆ ಸದಸ್ಯ ಎಲ್.ಡಿ.ಚಂದಾವರಿ ಅವರಿಗೆ ಸಂಘದಿಂದ ‘ಭಾವೈಕ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಹನಾ ಪಿಂಜಾರ, ತಾಜುದ್ದೀನ್ ನದಾಫ್, ಸೂಫಿಯಾ ಡಿ.ನದಾಫ್ ಅವರನ್ನು ಸನ್ಮಾನಿಸಲಾಯಿತು. ಡಾ. ರಜಿಯಾ ಬೇಗಂ ಅವರ ‘ಪಿಂಜಾರ ಮಹಿಳೆಯರ ಜನಪದ ಸಂಸ್ಕೃತಿ’ ಪುಸ್ತಕವನ್ನು ಸಾಹಿತಿ, ಶಿವಮೊಗ್ಗದ ಶ್ರೀಮತಿ ಡಿ.ಬಿ. ರಜಿಯಾಬೇಗಂ ಅವರು ಲೋಕಾರ್ಪಣೆಗೊಳಿಸಿದರು.

ಮಾಜಿ ಸಚಿವ ಬಿ.ಆರ್.ಯಾವಗಲ್, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂ.ಎಚ್. ಬೆಂಡಿಗೇರಿ, ಜಿ.ಡಿ. ನದಾಫ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ಗದಗ ಜಿಲ್ಲಾಧ್ಯಕ್ಷ ಕೆ.ಎಫ್. ಹಳ್ಯಾಳ, ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚಮನಸಾಬ ಕೆ., ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದ್ದೇವರಮಠ, ಮುಖಂಡರಾದ ಕಲ್ಮುದ್ದೀನಶಾ ಮಕಾನದಾರ, ಜಿಲ್ಲಾ ವಕ್ಫ್ ಬೋರ್ಡ್ ಚೇರಮನ್ ಜಿ.ಎಂ. ದಂಡಿನ, ಮಾಜಿ ಅಧ್ಯಕ್ಷ ಎಂ.ಆರ್. ಅಣ್ಣಿಗೇರಿ, ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಂ ನಾಗ್ತೆ, ಖಜಾಂಚಿ ಶಾಬುದ್ದೀನ ನೂರಭಾಷಾ, ಸಂಘಟನಾ ಕಾರ್ಯದರ್ಶಿಗಳಾದ ಎಂ.ಎ. ಗಾಡಗೋಳಿ, ಎಸ್.ಎಚ್. ಮುದಕವಿ, ಗದಗ ವಿಭಾಗೀಯ ಉಪಾಧ್ಯಕ್ಷ ಪಿ. ಇಮಾಮಸಾಬ, ವಿಭಾಗೀಯ ಕಾರ್ಯದರ್ಶಿ ಎಚ್.ಆರ್. ನದಾಫ, ಮಹಿಳಾ ಘಟಕದ ಗದಗ ಜಿಲ್ಲಾಧ್ಯಕ್ಷೆ ತಾಜಬೀ ನದಾಫ, ಜಿಲ್ಲಾ ಕಾರ್ಯದರ್ಶಿ ಎಂ.ಬಿ. ನದಾಫ ವಕೀಲರು, ಜಿಲ್ಲಾ ಖಜಾಂಚಿ ಎಸ್.ಎಂ. ಅಣ್ಣಿಗೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಐ.ಎನ್. ಹುಬ್ಬಳ್ಳಿ, 32ನೇ ಸಂಸ್ಥಾಪನಾ ದಿನಾಚರಣೆ ಸಮಿತಿ ಅಧ್ಯಕ್ಷ ಕೆ.ಎಫ್. ಹುಲಕೋಟಿ (ರಬ್ಬಾನಿ), ರಾಜೇಸಾಬ ಅಣ್ಣಿಗೇರಿ, ಅಬ್ದುಲಶರೀಪ ನೂರಭಾಷಾ, ರಾಜೆಸಾಬ ಶಿಶುವಿನಹಳ್ಳಿ, ಆರ್.ವಾಯ್ ನದಾಫ್, ಎ.ಹೆಚ್ ಹೊಸಳ್ಳಿ, ಮಹಮ್ಮದರಫಿ ಅಣ್ಣಿಗೇರಿ, ಮೈನುದ್ದಿನ್ ನಲವಡಿ, ಜಾಕೀರ ಬಾಗಲಕೋಟ ಸೇರಿ ಹಲವರು ಉಪಸ್ಥಿತರಿದ್ದರು.

ಡಾ.ವೈ.ಆರ್. ಬೇಲೇರಿ ಅವರು ಸ್ವಾಗತಿಸಿದರು. ಆರ್‌ಜೆ ರಷೀದ ಕಾರ್ಯಕ್ರಮ ನಿರೂಪಿಸಿದರು.

ಗದಗ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪಿಂಜಾರ ಭವನಕ್ಕೆ 1 ಕೊಟಿ ರೂ.

ಗದಗ : ಗದಗ ನಗರದಲ್ಲಿ ನದಾಫ್, ಪಿಂಜಾರ ಸಮಾಜಕ್ಕೆ ನೀಡಿರುವ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲೇ ಸರ್ಕಾರದಿಂದ 1 ಕೋಟಿ ರೂ. ದೊರಕಿಸಿಕೊಡಲಾಗುವುದು. ಹೊಸಪೇಟೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಹಿಂಪಡೆದಿರುವ 75 ಲಕ್ಷ ರೂ. ಹಣವನ್ನು ಡಿಸೆಂಬರ್ ಒಳಗೆ ದೊರಕಿಸಿಕೊಡಲಾಗುವುದು ಎಂದು ರಾಜ್ಯದ ಕಾನೂನು, ಸಂಸದೀಯ ವ್ಯಹರಾಗಳ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರೂ ಆಗಿರುವ ಎಚ್.ಕೆ. ಪಾಟೀಲ ಅವರು ಭರವಸೆ ನೀಡಿದರು.

ಪಿಂಜಾರ ಸಮಾಜದವರು ರೈತರಂತೆ ಮುಗ್ಧರು. ತಮಗೆ ಬೇಕಾಗಿರುವುದನ್ನು ಕಸಿದುಕೊಳ್ಳುವ ಮನೋಭಾವ ಇಲ್ಲದವರು. ಆದರೆ, ಹೋರಾಟದ ಮೂಲಕ ಪಡೆದುಕೊಳ್ಳಲು ಮುಂದಾಗಬೇಕಿದೆ’.

ಎಚ್.ಕೆ. ಪಾಟೀಲ, ಕಾನೂನು ಸಚಿವರು

ನದಾಫ/ಪಿಂಜಾರ ಸಮಾಜಕ್ಕೆ ಪ್ರತ್ಯೇಕವಾಗಿ ಒಳಮೀಸಲಾತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕು. ಸಮಾಜದ ಬಗ್ಗೆ ಕುಲಶಾಸ್ತ್ರಿಯ ಅಧ್ಯಯನಕ್ಕೆ ಮುಂದೆ ಬಂದಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬೇಕಾದ ಅನುದಾನ ಒದಗಿಸಬೇಕು.

-ಎಚ್. ಜಲೀಲಸಾಬ, ಸಂಘದ ರಾಜ್ಯಾಧ್ಯಕ್ಷ

ನದಾಫ್, ಪಿಂಜಾರ ಸಮಾಜದವರೊಂದಿಗೆ ನಾವು ಹಿಂದಿನಿಂದಲೂ ಅನ್ಯೋನ್ಯದಿಂದ ಬದುಕಿದ್ದೇವೆ. ನಾವು ಯಾವತ್ತಿಗೂ ನಿಮ್ಮನ್ನು ಬೇರೆಯಾಗಿ ಕಂಡಿಲ್ಲ. ಸಾಧ್ಯ ಇರುವಾಗಲೆಲ್ಲಾ ರಾಜಕೀಯ ಪ್ರಾತಿನಿಧ್ಯ ಅವಕಾಶ ನೀಡಲಾಗಿದೆ.

– ಜಿ.ಎಸ್.ಪಾಟೀಲ, ರೋಣ ಶಾಸಕ

ನದಾಫ/ಪಿಂಜಾರ ಸಮಾಜದವರಿಗೆ ಹಿಂದಿನ ಸರ್ಕಾರ ಪ್ರವರ್ಗ-1 ಜಾತಿ ಪ್ರಮಾಣ ಪತ್ರ ಸೌಲಭ್ಯ ಆರಂಭಿಸಿದೆ. ಕೆಲವರಿಗೆ ಅಧಿಕಾರಿಗಳ ಎಡವಟ್ಟಿನಿಂದ ಸಿಗುತ್ತಿಲ್ಲ. ಹಿಂದಿನ ಸರ್ಕಾರ ಘೋಷಿಸಿದ್ದ ಪಿಂಜಾರ-ಅಭಿವೃದ್ಧಿ ನಿಗಮ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಈ ಸರ್ಕಾರ ಚಿಂತನೆ ಮಾಡಲಿ.

-ಎಸ್.ವಿ. ಸಂಕನೂರ, ವಿಧಾನ ಪರಿಷತ್ ಸದಸ್ಯರು

ಎಂ.ಬಿ. ನದಾಫ, ಜಿಲ್ಲಾ ಪ್ರಧಾನ ಕಾರ್ಯದರ್ಶಿ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ