Thursday, September 19, 2024
Google search engine
Homeಗದಗಗದಗ : ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಅಧಿಕಾರಿಗಳ ನೈತಿಕ ಜವಾಬ್ದಾರಿ

ಗದಗ : ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಅಧಿಕಾರಿಗಳ ನೈತಿಕ ಜವಾಬ್ದಾರಿ

ಗದಗ  ಜುಲೈ 9: ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು. ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನೌಕರನ ನೈತಿಕ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಮುಖ್ಯಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣಗಳ ವಿಲೇವಾರಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತು ಸಭೆಯನ್ನು ಉದ್ಘಾಟಿಸಿ ನಂತರ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳಿಂದ ಜಾರಿಯಾಗಿರುವ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲಿ. ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವಾಗ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಸೌಲಭ್ಯಗಳನ್ನು ತಲುಪಿಸುವಾಗ ವಿನಾಕಾರಣ ವಿಳಂಬ ಮಾಡಿದರೆ ಅಥವಾ ಸೌಲಭ್ಯಗಳನ್ನು ಒದಗಿಸದೇ ಇದ್ದಲ್ಲಿ ಅಂತಹ ವ್ಯಕ್ತಿಯ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗಿಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ನೊಂದ ವ್ಯಕ್ತಿಗಳು ಪ್ರಕರಣ ದಾಖಲಿಸಿದ ಮೇಲೆ ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಪ್ರಕರಣ ಇತ್ಯರ್ಥ ಪಡಿಸುವಾಗ ಸಂಬಂಧಿತ ಅಧಿಕಾರಿಗಳಿಂದ ವರದಿ ಪಡೆದು ತನಿಖೆ ನಡೆಸಲಾಗುವುದು ಎಂದರು.   

ಸಾರ್ವಜನಿಕರು ಸರ್ಕಾರಿ ಇಲಾಖೆಗಳಿಗೆ ಮಾಹಿತಿ ಕೇಳಿದಾಗ ಕೆಲವೊಂದು ಸಂದರ್ಭದಲ್ಲಿ ಕಾನೂನು ತೊಡಕುಗಳು ಉಂಟಾಗಿದ್ದರೂ ಸಂಯಮದಿಂದ ಮಾತನಾಡಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗುತ್ತದೆ. ಕೇಳಿದ ಮಾಹಿತಿಗನುಗುಣವಾಗಿ ಶೀಘ್ರವಾಗಿ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು. ಕೆಲಸದೊತ್ತದಲ್ಲಿಯೂ ಸಹ ಸೌಜನ್ಯದಿಂದ ವರ್ತಿಸಬೇಕಾಗುತ್ತದೆ. ದೂರುಗಳು ಬಂದಾಗ ಸೂಕ್ತ ಮಾಹಿತಿ ಒದಗಿಸಿ ಇನ್ನಷ್ಟು ದೂರುಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಈ ಮೊದಲು ದೂರು ಕೊಟ್ಟವರು ಪರಿಹಾರಕ್ಕಾಗಿ ಬೆಂಗಳೂರಿಗೆ ಹೋಗುವ ಪರಿಪಾಠ ಇತ್ತು. ಆದರೆ ಇದೀಗ ಜಿಲ್ಲಾ ಮಟ್ಟದಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳು ಯಾವ ರೀತಿ ಸಾರ್ವಜನಿಕರಿಗೆ ತಲುಪುತ್ತಿವೆ ಎನ್ನುವುದರ ಕುರಿತು ಪರಿಶೀಲನೆ ನಡೆಸಲು ವಿವಿಧ ಜಿಲ್ಲೆಗಳಲ್ಲಿ ಆಯೋಗದಿಂದ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಮಾತನಾಡಿ ಒಬ್ಬ ವ್ಯಕ್ತಿ ಜನನದಿಂದ ಬರುವ ಎಲ್ಲ ಹಕ್ಕುಗಳು ಮಾನವ ಹಕ್ಕುಗಳಾಗುತ್ತದೆ. ಬದುಕುವ ಹಕ್ಕು, ಸಮಾನತೆ ಹಕ್ಕು, ಗೌರವಯುತವಾಗಿ ಬಾಳುವ ಹಕ್ಕು, ಗೌರವಯುತ ಹುದ್ದೆ ಅಲಂಕರಿಸುವ ಹಕ್ಕು, ಅಭಿವ್ಯಕ್ತಿ ಹಕ್ಕು ಈ ಮೊದಲಾದ ಹಕ್ಕುಗಳೇ ಸಂವಿಧಾನದ ಮೂಲಭೂತ ಹಕ್ಕುಗಳನ್ನಾಗಿ ಮಾಡಲಾಗಿದೆ. ಈ ಹಕ್ಕುಗಳಿಗೆ ಧಕ್ಕೆಯಾದಾಗ ಅವುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಆಯಾ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯ ವಿವಿಧ ಇಲಾಖೆಯ ಹಾಸ್ಟೆಲ್‍ಗಳಲ್ಲಿನ ವಿದ್ಯಾರ್ಥಿಗಳಿಗೆ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಹಾಗೂ ಕಾರಾಗೃಹದಲ್ಲಿನ ಬಂಧಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಇಲಾಖೆಯ ಮುಖ್ಯಸ್ಥರ ಆದ್ಯಕರ್ತವ್ಯವಾಗಿದೆ. ಅದೇ ರೀತಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೂ ಸಹ ಮೂಲಭೂತ ಸೌಲಭ್ಯ ಒದಗಿಸಬೇಕಾಗುತ್ತದೆ. ಕಾರ್ಮಿಕ ಅಧಿಕಾರಿಗಳು ಅಂತಹ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಅಲ್ಲಿ ಏನಾದರೂ ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಸಂಬಂಧಿತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪೊಲೀಸ ಇಲಾಖೆ ಹಾಗೂ ವಸತಿ ನಿಲಯಕ್ಕೆ ಸಂಬಂಧಿತ ಪ್ರಕರಣಗಳ ಕುರಿತು ಇಲಾಖೆಯವರು ಆಯೋಗಕ್ಕೆ ವರದಿ ಸಲ್ಲಿಸುವಾಗ ಅಲ್ಲಿನ ಸಿಸಿಟಿವಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸಾರ್ವಜನಿಕರಿಗೆ ಕುಡಿಯುವ ನೀರು, ರಸ್ತೆ ಸ್ವಚ್ಛತೆ, ಒಳಚರಂಡಿ ವ್ಯವಸ್ಥೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಇಂತಹ ಮೂಲಭೂತ ಸೌಲಭ್ಯ ಒದಗಿಸುವುದು ಅವಶ್ಯಕವಾಗಿವೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವಾಗ ಕರ್ತವ್ಯ ಲೋಪವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲು ಮಾನವ ಹಕ್ಕುಗಳ ಆಯೋಗದಿಂದ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ ಪೂಜಾರ್ ಮಾತನಾಡಿ ಗದಗ ಜಿಲ್ಲೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯಾದ 14 ಪ್ರಕರಣಗಳು ವಿವಿಧ ಹಂತದ ತನಿಖೆಯಲ್ಲಿವೆ. ಮಾನವೀಯತೆಯೇ ಮಾನವ ಹಕ್ಕು ಆಯೋಗದ ಧ್ಯೇಯವಾಗಿದ್ದು ಕಾನೂನಿನಡಿ ಸರ್ವರಿಗೂ ಸಮಾನ ಹಕ್ಕು ಒದಗಿಸಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯವಾಗಿದೆ ಎಂದರು.

ಸಭೆಯಲ್ಲಿ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಎ.ದಿನೇಶ ಸಂಪತ್‍ರಾಜ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ.ಪಲ್ಲೇದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ.ಸರ್ವರನ್ನು ಸ್ವಾಗತಿಸಿದರು. ಪ್ರಾಚಾರ್ಯರಾದ ಬಿ.ಜಿ.ಗಿರಿತಿಮ್ಮಣ್ಣವರ ನಿರ್ವಹಿಸಿದರು. ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ ವಂದಿಸಿದರು.

ಸಂವಾದದ ನಂತರ ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿದ ಜಿಲ್ಲೆಯ ಒಟ್ಟು 14ಪ್ರಕರಣಗಳ ವಿಚಾರಣೆ ನಡೆಸಿದರು. ಇದರಲ್ಲಿ ಪೊಲೀಸ ಇಲಾಖೆ, ಗದಗ ಬೆಟಗೇರಿ ನಗರಸಭೆ, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿತ ಪ್ರಕರಣಗಳ ವಿಚಾರಣೆ ಜರುಗಿತು. ನಂತರ ಸಾರ್ವಜನಿಕರು ಇದೇ ಸಂದರ್ಭದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು