ಗದಗ ಜುಲೈ 9 : ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಸಲ್ಲಿಕೆಯಾದ 9 ಸಾವಿರ ಪ್ರಕರಣಗಳ ಪೈಕಿ ಕಳೆದ 6 ತಿಂಗಳಲ್ಲಿ 6 ಸಾವಿರ ಪ್ರಕರಣಗಳನ್ನು ವಿಲೇ ಮಾಡಲಾಗಿದೆ. 3 ಸಾವಿರ ಪ್ರಕರಣಗಳು ವಿವಿಧ ಹಂತದಲ್ಲಿವೆ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ಮಂಗಳವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 8 ತಿಂಗಳಿಂದ ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕವಾಗಿರಲಿಲ್ಲ. 2023 ರ ನವೆಂಬರ್ 28 ರಂದು ಎಲ್. ನಾರಾಯಣಸ್ವಾಮಿ ಅವರನ್ನು ಸರ್ಕಾರ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಯಿತು. ನಂತರ ಅವರು ಕೇಂದ್ರದ ಲೋಕ ಪಾಲ ನೇಮಕಗೊಳಿಸುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದರು. ತದನಂತರ ನಾನು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.
ಆಯೋಗದಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಿ ಜಿಲ್ಲಾ ಹಂತದಲ್ಲಿಯೇ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಬೀದರ, ಕಲಬುರ್ಗಿ, ಯಾದಗಿರಿ , ಹಾಸನ, ಚಿಕ್ಕಮಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪ್ರಕರಣಗಳ ವಿಲೇವಾರಿ ನಡೆಸಲಾಗಿದೆ. ಗದಗ ಜಿಲ್ಲೆಗೆ ಭೇಟಿ ನೀಡಿರುವುದು 10 ನೇ ಜಿಲ್ಲೆಯಾಗಿದೆ. ನಂತರ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗೆ ತೆರಳಿ ಪ್ರಕರಣಗಳ ವಿಲೇವಾರಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಪ್ರಕರಣಗಳ ವಿಚಾರಣೆ ದೂರು ಸ್ವೀಕಾರ ಮಾಡುವುದರಿಂದ ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದೆ. ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಆಯೋಗದ ಕೇಂದ್ರ ಕಚೇರಿಗೆ ಪದೇ ಪದೇ ಅಲೆಯುವುದರಿಂದ ಮುಕ್ತಿ ಸಿಕ್ಕಂತಾಗಿ ಸಮಯ ಹಾಗೂ ಆರ್ಥಿಕ ಹೊರೆ ಕಡಿಮೆಯಾಗಿದೆ ಎಂದು ಹೇಳಿದರು.
ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಮಾತನಾಡಿ ಜಿಲ್ಲಾ ಭೇಟಿ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಸ್ಥಳೀಯ ಸಂಸ್ಥೆಗಳು, ಕಾರಾಗೃಹಗಳಿಗೆ ಭೇಟಿ ನೀಡುವುದರ ಮೂಲಕ ಅಲ್ಲಿನ ಪರಿಸ್ಥಿತಿ ಅವಲೋಕನ ನಡೆಸಲಾಗುತ್ತದೆ. ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಒಟ್ಟಾರೆ ಆಯೋಗದಿಂದ ಮಾನವ ಹಕ್ಕುಗಳ ಉಲ್ಲಂಘನೆ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸರಿಪಡಿಸದಿದ್ದಲ್ಲಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಮೇಲೆ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಆಯೋಗದ ಕಾರ್ಯದರ್ಶಿ ಎ.ದಿನೇಶ ಸಂಪತ್ ರಾಜ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ ಪೂಜಾರ , ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು.