ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ

ಬೇಸಿಗೆ ಬಂತೆಂಬ ಭಯಬೇಡ ಉದ್ಯೋಗ ಖಾತ್ರಿ ಕೆಲಸ ಇದೆ

ಕಾಯಕಬಂಧುಗಳ ತರಬೇತಿ ಕಾರ್ಯಾಗಾರದಲ್ಲಿ ಎಸ್.ಕೆ.ಇನಾಮದಾರ ಹೇಳಿಕೆ

ನರಗುಂದ : ಬರಗಾಲವಿದೆಯೆಂದು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗಲ್ಲ ಎಂಬ ಭಯಬೇಡ. ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಗ್ರಾಮೀಣ ಪ್ರದೇಶಗಳ ಕಡುಬಡವರಿಗೂ ಯೋಜನೆಯ ಸದೂಪಯೋಗ ದೊರಕುವಂತ್ತಾಗಿ ಕೆಲಸದ ಹಸುವಿರುವವರಿಗೆ ಕೆಲಸ ಕೊಡುವಂತೆ ಕಾಯಕಬಂಧುಗಳು ಕಾರ್ಯನಿರ್ವಹಿಸಬೇಕು ಅಂತ ನರಗುಂದ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಎಸ್.ಕೆ.ಇನಾಮದಾರ ಅಭಿಪ್ರಾಯಪಟ್ಟರು.

ನಗರದ ತಾಲೂಕು ಪಂಚಾಯತ ಸಭಾಭವನದಲ್ಲಿ ಗುರುವಾರ ನಡೆದ ಪಿಡಿಓ, ಕಾಯಕಬಂಧು ಹಾಗೂ ನರೇಗಾ ಸಿಬ್ಬಂದಿಯ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಬರಗಾಲದ ತೀವೃತೆಯಿಂದ ಕೆಲಸ ಸಿಗದಿರುವ ಆತಂಕದಲ್ಲಿರುವ ಗ್ರಾಮೀಣ ಪ್ರದೇಶ ಕೂಲಿಕಾರರಿಗೆ ನೆರವಾಗಲೆಂದು ಎಪ್ರೀಲ್-೧ ರಿಂದ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಇದ್ದೂರಲ್ಲೇ ನರೇಗಾ ಕೆಲಸ ಕೊಡುತ್ತಿರುವುದು ಗ್ರಾಮೀಣ ಪ್ರದೇಶದ ಜನರ ಗುಳೆ ತಪ್ಪಿಸುವ ಕೆಲಸವಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರವಹಿಸಿದೆ. ಯೋಜನೆಯಡಿ ವಾರ್ಷಿಕವಾಗಿ ೧೦೦ ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತ್ತಾಗಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ. ತಾಲೂಕಿನ ಎಲ್ಲ ಗ್ರಾಪಂ ಗಳ ಕಾಯಕಬಂಧುಗಳು ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸ ಮಾಡಬೇಕು ಅಂತ ತರಬೇತಿಯಲ್ಲಿ ಭಾಗವಹಿಸಿದ್ದ ಕಾಯಕಬಂಧುಗಳಿಗೆ ಕಿವಿಮಾತು ಹೇಳಿದರು.

ಬೇಸಿಗೆ ಅವಧಿಯ ೬೦ ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದ್ರೆ ಕೂಲಿಕಾರರಿಗೆ ೨೦೯೪೦ ರೂಪಾಯಿ ಸಿಗುತ್ತದೆ. ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಈ ಹಣವನ್ನು ಮುಂಗಾರಿನ ಕೃಷಿ ಭಿತ್ತನೆಯ ಕಾರ್ಯಕ್ಕೆ ಸದೂಪಯೋಗಪಡಿಸಿಕೊಳ್ಳಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಮಾರುತಿ ಅಸುಂಡಿ ಅವರು ತರಬೇತಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು, ನರೇಗಾ ಯೋಜನೆಯ ಕಾಮಗಾರಿಗಳಿಂದ ಶಾಲೆಯ ಮೂಲಸೌಕರ್ಯಗಳ ನಿರ್ಮಾಣಕ್ಕೆ ನೆರವಾಗಿದೆ ಅಂತ ಯೋಜನೆಯ ಕಾಮಗಾರಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. 

ತರಬೇತಿಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು ಸಂತೋಷಕುಮಾರ್ ಪಾಟೀಲ್ ಮಾತನಾಡಿ, ಕಾಯಕಬಂಧುಗಳು ಪ್ರತಿವರ್ಷ ಬದಲಾವಣೆಯಾಗುವ ನಿಯಮಾವಳಿಗೆ ಅನುಗುಣವಾಗಿ ನರೇಗಾ ಕೆಲಸ ನಿರ್ವಹಿಸಲು ತರಬೇತಿ ಅತ್ಯವಶ್ಯಕವಾಗಿದೆ. ನರೇಗಾ ಕೆಲಸದಲ್ಲಿ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತ್ತಾಗಬೇಕು. ಕಾಯಕಬಂಧುಗಳು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರನ್ನು ಸಂಪರ್ಕಿಸಿ ನರೇಗಾ ಯೋಜನೆಯಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಶ್ರಮವಹಿಸಬೇಕೆಂದು ತಿಳಿಸಿದರು. 

ಕಾರ್ಯಾಗಾರದಲ್ಲಿ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಮಾತನಾಡಿ, ಕಾಯಕಬಂಧುಗಳು ಎಂದರೇ ಯಾರು? ಕಾಯಕಬಂಧುಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ತರಬೇತಿ ನೀಡಿದರು.

ಬೇಸಿಗೆ ಅವಧಿಯಲ್ಲಿ ರೈತರ ಹೊಲದಲ್ಲಿ ಯೋಜನೆಯಡಿ ನಿರ್ಮಿಸುವ ಕಂದಕಬಧುಗಳ ನಿರ್ಮಾಣ ಮತ್ತು ಅನುಷ್ಟಾನ ಕುರಿತು ತಾಂತ್ರಿಕ ಸಂಯೋಜಕ ಹನಮಂತ ಡಂಬಳ ವಿಷಯ ಮಂಡಿಸಿದರು. ಕೂಲಿಕಾರರ ಹಾಜರಾತಿ ನಿರ್ವಹಣೆ ಕುರಿತು ಎಂಐಎಸ್ ಸಂಯೋಜಕ ಮಹೇಶ ಚಿತ್ತವಾಡಗಿ ಅವರು ವಿಷಯ ಮಂಡಿಸಿದರು.

ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರೂಣಿಸುವ ಮೂಲಕ ಎಸ್.ಕೆ.ಇನಾಮದಾರ, ಕಾರ್ಯನಿರ್ವಾಹಕ ಅಧಿಕಾರಿಗಳು, ಸಂತೋಷಕುಮಾರ್ ಪಾಟೀಲ್, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ, ಮಾರುತಿ ಅಸುಂಡಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ತಾಲೂಕು ಪಂಚಾಯತ ನರಗುಂದ ಅವರು ಜಂಟಿಯಾಗಿ ಉದ್ಘಾಟಿಸಿದರು. ತರಬೇತಿ ಕಾರ್ಯಾಗಾರದಲ್ಲಿ ನರಗುಂದ ತಾಲೂಕಿನ ೧೩ ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿ ವರ್ಗ ಹಾಜರಿದ್ದರು.

ಬೇಸಿಗೆ ದಿನದಲ್ಲಿ ಕೆಲಸದ ಸಂದರ್ಭದಲ್ಲಿ ನರೇಗಾ ಕೂಲಿಕಾರರಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಬಾರದೆAದು ಆರೋಗ್ಯ ಇಲಾಖೆಯಿಂದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತರಬೇತಿಯಲ್ಲಿ ಮಾಹಿತಿ ಒದಗಿಸಲಾಯಿತು. ನರಗುಂದ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ವ್ಹಿ.ಕೊಣ್ಣೂರು ಅವರು ಕಾಯಕಬಂಧುಗಳಿಗೆ ಬೇಸಿಗೆಯ ಬಿಸಿಲಿನ ತಾಪವನ್ನು ಎದುರಿಸಿ ಕೆಲಸ ನಿರ್ವಹಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಒದಗಿಸಿದರು. ನರೇಗಾ ಕೂಲಿಕಾರರು ತೆಳುವಾದ ಬಿಳಿಬಣ್ಣದ ನೂಲಿನ ಬಟ್ಟೆಯನ್ನು ತೊಟ್ಟು ಕೆಲಸ ಮಾಡುವಂತೆ ತಿಳಿಸಿದರು. ಅಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳನ್ನು ಕುಡಿಯದೇ ಮನೆಯಲ್ಲಿ ಸಿದ್ಧಪಡಿಸಿದ ಮಜ್ಜಿಗೆ, ಪಾನಕದಂತಹ ಪಾನೀಯಗಳನ್ನು ಅತೀಯಾಗಿ ಸೇವಿಸಬೇಕೆಂದು ತಿಳಿಸಿದರು. ಮಧ್ಯಾಹ್ನ ೧೨ ಗಂಟೆಯೊಳಗಾಗಿ ನಿಮ್ಮ ಕೆಲಸ ಮುಕ್ತಾಯಗೊಳಿಸಿ ಅಂತ ಸಲಹೆ ನೀಡಿದರು.

Leave a Reply

Your email address will not be published. Required fields are marked *