ಗದಗ : ನಿಮ್ಮ ಗ್ರಾಮದಲ್ಲಿ ಸಮಸ್ಯೆಯೇ? 8277506000 ಡೈಲ್ ಮಾಡಿ : ಸಿಇಓ ಭರತ್ ಎಸ್

ಗದಗ : ಗ್ರಾಮೀಣ ಪ್ರದೇಶದ ಜನರ ಕುಂದು ಕೊರತೆಗಳ ನಿವಾರಣೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ನೂತನ ಹಾಗೂ ಏಕೀಕೃತ ಸಹಾಯವಾಣಿ 8277506000 ತೆರೆಯುವ ಮೂಲಕ ಪಾರದರ್ಶಕ ಹಾಗೂ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗುತ್ತಿದೆ.

ಈ ವಿಷಯದ ಕುರಿತು ಮಾಹಿತಿ ನೀಡಿದ ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಪಂಚಮಿತ್ರ ಸಹಾಯ ವಾಣಿ ಯನ್ನು 8277506000 ಆರಂಭಿಸಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಜನರ ಕುಂದು ಕೊರತೆ ಹಾಗೂ ಜನರಿಗೆ ಅವಶ್ಯವಿರುವ ಮಾಹಿತಿ ತಕ್ಷಣವೇ ಲಭಿಸುತ್ತದೆ ಎಂದರು.

8277506000 ಸಹಾಯವಾಣಿಯಿಂದ ಲಭ್ಯವಿರುವ ಸೌಲಭ್ಯಗಳು

ಒಂದು ಇಲಾಖೆಗೆ ಒಂದೆ ಸಹಾಯವಾಣಿ ಎಂಬ ಉದ್ದೇಶದಿಂದ ಈ ಸಂಖ್ಯೆಯನ್ನು ತೆರೆಯಲಾಗಿದ್ದು ನರೇಗಾ ಯೋಜನೆಯಡಿ ಮಾಡಲಾದ ಕೆಲಸಗಳು, ಗ್ರಾಮದ ಕುಂದು ಕೊರತೆಗಳು, ಜನನ ಮತ್ತು ಮರಣ ನೊಂದಣಿ, ಕಟ್ಟಡ ನಿರ್ಮಾಣ ಪರವಾನಗಿ, ಹೊಸ ನೀರು ಪೂರೈಕೆ ಸಂಪರ್ಕ, ನೀರು ಸರಬರಾಜಿನಲ್ಲಿ ಸಂಪರ್ಕ ಕಡಿತ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ, ಉದ್ದಿಮೆ ಪರವಾನಗಿ, ಸ್ವಾಧೀನ ಪ್ರಮಾಣ ಪತ್ರ, ನಾನಾ ಸೇವೆ ಸಂಬಂಧ ರಸ್ತೆ ಅಗೆತಕ್ಕೆ ಅನುಮತಿ, ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಜಾಬ್‌ಕಾರ್ಡ್‌ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು, ಹೊಸ ಇಲ್ಲವೇ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ, ಸೇರಿದಂತೆ ನಮೂನೆ 9/11ಎ, ನಮೂನೆ 11ಬಿ ಹೀಗೆ ಹಲವಾರು ಸೇವೆಗಳ ಲಾಭ ಪಡೆಯಬಹುದು. ಇದಲ್ಲದೆ ಚುನಾಯಿತ ಪ್ರತಿನಿಧಿಗಳ ವಿವರ, ಸಿಬ್ಬಂದಿ ವಿವರ, ಪೂರ್ಣಗೊಂಡ ಗ್ರಾಮ ಪಂಚಾಯಿತಿ ಸಭೆಗಳ ನಡಾವಳಿಗಳು, ಗ್ರಾಮ ಪಂಚಾಯಿತಿಯ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ಮಾಹಿತಿ, ಸೇವೆಗಳ ವಿವರ, ಸ್ವಸಹಾಯ ಗುಂಪಿನ ಮಾಹಿತಿ, ಗ್ರಾಮ ಪಂಚಾಯತ್‌ಗಳ ಕಾರ್ಯಕ್ರಮಗಳು- ಉಪಕ್ರಮಗಳು. ಹಾಗೆಯೇ 4(1)(ಎ) ಮತ್ತು 4(1)(ಬಿ) ಆರ್‌ಟಿಐ ದಾಖಲೆಗಳು.

ವಾಟ್ಸಪ್ ಮೂಲಕವೂ ಬಳಸಬಹುದು, ಬಳಸುವುದು ಹೇಗೆ?

ಈ ಡಿಜಿಟಲ್‌ ಸೇವೆ ಪಡೆಯಲು ಸ್ಮಾರ್ಟ್‌ಫೋನ್‌ ಅಗತ್ಯ. ಈ ಮೊಬೈಲ್‌ ಸಂಖ್ಯೆಯನ್ನು ನೋಂದಾಯಿಸಿಕೊಂಡು ಚಾಟ್‌ ಶುರು ಮಾಡಬಹುದು. ಮೊದಲಿಗೆ ‘ಹಾಯ್‌’ ಎಂಬ ಸಂದೇಶ ಕಳುಹಿಸಬೇಕು. ಆಗ ಪರದೆ ಮೇಲೆ ಭಾಷೆ ಆಯ್ಕೆ ಅವಕಾಶ ಸಿಗಲಿದೆ. ಬಳಿಕ ಜಿಲ್ಲೆ, ತಾಲೂಕು ಹಾಗೂ ನಿರ್ದಿಷ್ಟ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೇವೆ, ಮಾಹಿತಿ, ಕುಂದುಕೊರತೆ ಎಂಬ ಮೂರು ಆಯ್ಕೆ ಮೂಡಲಿದ್ದು, ಮುಂದಿನ ಸೇವೆ ಪಡೆಯಬಹುದು.

ಒಟ್ಟಾರೆಯಾಗಿ ಪಾರದರ್ಶಕತೆ ಆಡಳಿತ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರವೂ ಈ ಸಹಾಯವಾಣಿ ಯನ್ನು ತೆರಯಲಾಗಿದ್ದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಹಾಯವಾಣಿಯು ತೆರೆದಿರುತ್ತದೆ. ದಯವಿಟ್ಟು ಜನರು ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.

Leave a Reply

Your email address will not be published. Required fields are marked *