ಗದಗ : ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ-ಕಾರಿನ ನಡುವೆ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೈರನಹಟ್ಟಿ ಬಳಿಯ ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಲ್ಲಿ ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಾಗಲಕೋಟೆ ಮೂಲದ ಸಿದ್ದರಾಮ ಹಾಗೂ ಹೇಮಾ ಮೃತಪಟ್ಟವರು. ಇಬ್ಬರು ಮಕ್ಕಳಾದ ಮಲ್ಲಿಕಾರ್ಜುನ ಹಾಗೂ ಸಹನಾ ಗಂಭೀರವಾಗಿ ಗಾಯಗೊಂಡಿದ್ದು, ನರಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿದ್ದರಾಮ ಕುಟುಂಬ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ವಾಪಸಾಗುತ್ತಿತ್ತು. ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಲಾರಿ ಬಾಗಲಕೋಟೆಗೆ ಹೊರಟಿದ್ದ ಕಾರಿನ ನಡುವೆ ಡಿಕ್ಕಿಯಾಗಿದ್ದು, ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ನರಗುಂದ ಸಿಪಿಐ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.