ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆ
ಗದಗ ಅಕ್ಟೋಬರ್ 28 : ಜಿಲ್ಲೆಯಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೊಮವಾರ ಕನ್ನಡ ರಾಜ್ಯೋತ್ಸವ ಅಚರಣೆಯ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಯಾವುದೇ ಲೋಪಗಳಿಲ್ಲದಂತೆ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಮಿತಿಯವರು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕೆಂದು ಸೂಚಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವದ ದಿನದ ಹಿಂದಿನ ದಿನ ಹಾಗೂ ಕನ್ನಡ ರಾಜ್ಯೋತ್ಸವದ ದಿನ ಎರಡು ದಿನ ಸರ್ಕಾರಿ ಕಚೇರಿ ಹಾಗೂ ನಗರದ ವಿವಿಧ ವೃತ್ತಗಳಲ್ಲಿ ಸ್ವಚ್ಛತೆಯೊಂದಿಗೆ ವಿದ್ಯುತ್ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಅಂದು ಬೆಳಿಗ್ಗೆ 7.30 ಗಂಟೆಗೆ ಗದಗ ಬೆಟಗೇರಿ ನಗರಸಭೆ ಪದವಿ ಪೂರ್ವ ಕಾಲೇಜ ಆವರಣದಿಂದ ತಾಯಿ ಭುವನೇಶ್ವರಿಯ ಮೆರವಣಿಗೆಯು ವಿವಿಧ ವೃತ್ತಗಳಲ್ಲಿ ಸಂಚರಿಸಿ ನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ತಲುಪಲಿದೆ. ಮೆರವಣಿಗೆಯಲ್ಲಿ ಕಲಾ ತಂಡಗಳು, ವಿವಿಧ ಇಲಾಖೆಗಳ ಯೋಜನೆಗಳ ಕುರಿತ ಸ್ಥಬ್ಧಚಿತ್ರಗಳೊಂದಿಗೆ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ಶಾಲಾ ಕಾಲೇಜು ಮಕ್ಕಳು ಪಾಲ್ಗೊಳ್ಳಬೇಕು ಈ ಕುರಿತು ಮೇರವಣಿಗೆ ಮೇಲುಸ್ತುವಾರಿ ಅಧಿಕಾರಿಗಳು ಕ್ರಮ ವಹಿಸಲು ಹೇಳಿದರು.
ಬೆಳಿಗ್ಗೆ 9 ಗಂಟೆಗೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುವರು. ಕಾರ್ಯಕ್ರಮಕ್ಕೆ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕಾಗುತ್ತದೆ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಮಕ್ಕಳು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಸೂಚನೆ ನೀಡಿದರು.
ಪೊಲೀಸ್ ಪಡೆ, ಹೋಮಗಾರ್ಡ, ಭಾರತ ಸೇವಾ ದಳಗಳಿಂದ ಪರೇಡ್, ಪಥ ಸಂಚಲನ ಜರುಗಲಿವೆ. ಕಾರ್ಯಕ್ರಮದ ಸ್ಥಳದ ಸ್ವಚ್ಛತೆ ಹಾಗೂ ಅತಿಥಿಗಳಿಗೆ ಆಸನದ ವ್ಯವಸ್ಥೆ , ಅಲ್ಪೋಪಹಾರದ ವ್ಯವಸ್ಥೆ ಕುರಿತು ಕ್ರಮ ಕೈಗೊಳ್ಳಬೇಕು.
ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪರಿಣಿತರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೆಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು, ಶಿಷ್ಟಾಚಾರದನ್ವಯ ಅತಿಥಿ ಗಣ್ಯರ ಅಹ್ವಾನ ಹಾಗೂ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾರ್ಯಕ್ರಮ ಯಶಸ್ಸಿಗೆ ಎಲ್ಲರು ಶ್ರಮ ಅಗತ್ಯ. ಶಾಲಾ ಮಕ್ಕಳ ಬಾಗವಹಿಸುವಿಕೆ ಅಧಿಕ ಸಂಖ್ಯೆಯಲ್ಲಿ ಇರಲಿ ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರು, ಯುವಜನ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ, ವಾರ್ತಾಧಿಕಾರಿ ವಸಂತ ಮಡ್ಲೂರ,ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ,ಡಿ.ವಾಯ್.ಎಸ್.ಪಿ ವಿದ್ಯಾನಂದ ನಾಯ್ಕ,ಬಿ.ಸಿ.ಎಮ್. ಜಿಲ್ಲಾ ಅಧಿಕಾರಿ ರವಿ ಗುಂಜೀಕರ್,ಡಿ.ಎಚ್.ಓ. ಡಾ.ಎಸ್ ಎಸ್ ನೀಲಗುಂದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.