ಗದಗ ಅಕ್ಟೋಬರ್ 8: ಜೀವನದಲ್ಲಿ ಉತ್ತಮ ಇಂಜಿನೀಯರಾಗಲು ಸದಾವಕಾಶ ದೊರಕಿದ್ದು, ಉದ್ಯೋಗ ದೊರಕಿಸಿಕೊಳ್ಳಲು ಡಿಪ್ಲೋಮಾ ವ್ಯಾಸಂಗವು ಉಪಯುಕ್ತವಾಗಿದೆ ಎಂದು ಪ್ರಾಚಾರ್ಯರಾದ ಭರಮಪ್ಪ ಬಡಪ್ಳವರ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್, ಸಂಸ್ಥೆಯಲ್ಲಿ ಮಂಗಳವಾರ 2024-25ನೇ ಸಾಲಿನ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ಯುವ ರೆಡ್‌ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡಲು ಕಾಲೇಜಿನ ಆಡಳಿತ ಹಾಗೂ ಎಲ್ಲ ಬೋಧಕ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ವಿದ್ಯಾರ್ಥಿಗಳ ಯಶಸ್ವಿ ಅಭ್ಯಾಸಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ ಲಕ್ಷö್ಮಣ ಎಮ್. ಆರಿ ಮಾತನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸ್ಪರ್ಧಾತ್ಮಕವಾಗಿ ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರಲು ಕರೆ ನೀಡಿದರು.
ಸಂಜೀವಕುಮಾರ ಬಿ. ಕಣಗಿನಹಾಳ ಮಾತನಾಡಿ ನಾನು ಸಹ ನಿಮ್ಮ ಹಾಗೆ ಡಿಪ್ಲೋಮಾ ಅಭ್ಯಾಸ ಮಾಡಿ ಈಗ ಸ್ವಂತ ಉದ್ದಿಮೆ ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಅಭ್ಯಾಸದ ನಂತರ ಸ್ವಂತ ಉದ್ದಿಮೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಉದ್ದಿಮೆಯಾಗಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗಾಧಿಕಾರಿಗಳ ಶ್ರೀಮತಿ ಜೈನಾಬಿ, ಕೊಟ್ರಗೌಡ, ಶಿವಾನಂದ ಪೂಜಾರ, ಶ್ರೀಮತಿ ಮಂಗಳಗೌರಮ್ಮ ಶಿವಸಿಂಪಿಗೇರ ಹಾಗೂ ಕಛೇರಿ ಅಧೀಕ್ಷಕರುಗಳಾದ ವೀರೇಶ ಕಂಠಿಮಠ, ರಮೇಶ ಮಾವಿನಕಾಯಿ ಹಾಗೂ ಸಮಸ್ತ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕು. ಚಂದ್ರು ರಾಮಗೇರಿ, ಕು. ಯಶವಂತ ಬಗಾಡೆ ಮತ್ತು ಸಂಸ್ಥೆಯ ಎಲ್ಲ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಜರಿದ್ದರು.