ಗದಗ : ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಯಾನವನ ಅಭಿವೃದ್ಧಿಪಡಿಸಿ ನಿರ್ವಹಿಸಿ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ

ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಗದಗ ಸೆಪ್ಟೆಂಬರ್ 27: ಜಿಲ್ಲಾಡಳಿತ ಭವನ, ಎಸ್.ಪಿ. ಆಪೀಸ್, ಎಸಿ ಆಫೀಸ್ , ಜಿಮ್ಸ್ ಸೇರಿದಂತೆ ಸರ್ಕಾರಿ ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಯಾನವನ ಅಭಿವೃದ್ಧಿಪಡಿಸಿ ನಿರ್ವಹಿಸಬೇಕೆಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರು ತಿಳಿಸಿದರು.

 ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿನ 7 ತಾಲೂಕುಗಳಲ್ಲಿ ತಲಾ ಒಂದು ಲಕ್ಷ ಗಿಡ ನೆಡುವ ಕೆಲಸವಾಗಬೇಕು. ಸಸಿ ನೆಡುವ ಕಾರ್ಯಕ್ರಮದ ಯೋಜನೆ ತಯಾರಿಸಿ ವಿವರವಾದ ಮಾಹಿತಿಯೊಂದಿಗೆ ಆಯಾ ತಾಲೂಕಿನ ಜನಪ್ರತಿನಿಧಿಗಳ ಮಾರ್ಗದರ್ಶನ ಪಡೆದು ಕೆಲಸ ನಿರ್ವಹಿಸಬೇಕು ಎಂದರು.

 ಗದಗ ತಾಲೂಕಿನಲ್ಲಿ ಸುಮಾರು 8 ಗ್ರಾಮಗಳಲ್ಲಿ ಸ್ಮಶಾನದ ( ರುದ್ರಭೂಮಿಯ) ಸಮಸ್ಯೆಯಿದ್ದು ಈ ಕುರಿತು ನವೆಂಬರ್ 1 ರೊಳಗೆ ರುದ್ರಭೂಮಿಗೆ ಸ್ಥಳ ಗುರುತಿಸಿ ಕ್ರಮ ಕೈಗೊಳ್ಳಬೇಕು. ರುದ್ರಭೂಮಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರುವ ಹಾಗೆ ನೊಡಿಕೊಳ್ಳಬೇಕು. ಸಾರ್ವಜನಿಕರಿಗೆ ಪಡಿತರ ಚೀಟಿ ವಿತರಣೆ ಮಾಡುವಾಗ ಯಾವುದೇ ಅವ್ಯವಹಾರ ಆಗದಂತೆ ನೋಡಿಕೊಳ್ಳಬೇಕು.

 ಹಿಂದುಳಿದ . ಅಲ್ಪಸಂಖ್ಯಾತರ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಅನಿರೀಕ್ಷಿತವಾಗಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮನೆ ಮನೆಗಳಿಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಜೆ.ಜೆ.ಎಂ. ಯೋಜನೆಯಡಿ ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸಬೇಕು. ನೀರು ವೃಥಾ ಪೋಲಾಗದಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಸಮರ್ಪಕವಾಗಿ ಆಗಬೇಕು.

 ಸರ್ಕಾರ ವಿವಿಧ ಇಲಾಖೆಗಳ ಸ್ಥಿರಾಸ್ತಿ ಸಂರಕ್ಷಣೆ ಜವಾಬ್ಧಾರಿ ಸಂಬಂದಿತ ಅಧಿಕಾರಿಯದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವುಗಳ ಸಂರಕ್ಷಣೆ ಮಾಡುವುದು ಹಾಗೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡು ಕಚೇರಿ ಕೆಲಸ ನಿರ್ವಹಣೆ ಮಾಡಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷತನ ತೋರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

 ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಮಾತನಾಡಿ ಜಿಲ್ಲೆಯಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯ ಕಡೆ ಹೆಚ್ಚು ಗಮನ ಹರಿಸಬೇಕು. ಜಿಲ್ಲೆಯು ಉನ್ನತ ಸ್ಥಾನದಲ್ಲಿ ಬರಲು ಕ್ರಿಯಾ ಯೋಜನೆ ರೂಪಿಸಬೇಕು. ಇತ್ತೀಚೆಗೆ ಸುರಿದ ಮಳೆಯಿಂದ ಬೆಟಗೇರಿಯ ಟರ್ನಲ್ ಪೇಟೆಯಲ್ಲಿನ ರಸ್ತೆ ಯಲ್ಲಿನ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ನಗರಸಭೆಯವರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಮಳೆ ನೀರು ಗಟಾರುಗಳಲ್ಲಿ ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಬೇಕು ಎಂದರು.

 ನರಗುಂದ ಶಾಸಕ ಸಿ.ಸಿ.ಪಾಟೀಲ ಅವರು ಮಾತನಾಡಿ ರೈತರಿಗೆ ವಿತರಿಸಲಾಗುವ ರಸಗೊಬ್ಬರದ ಗುಣಮಟ್ಟದ ಪರೀಕ್ಷೆ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ ಮಾಡುವಾಗ ವಿನಾಕಾರಣ ವಿಳಂಬ ಮಾಡಬಾರದು ಎಂದರು.

 ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಮಾತನಾಡಿ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ ಸಮರ್ಪಕ ರೀತಿಯಲ್ಲಿ ಆಗಬೇಕು. ಕುಡಿಯುವ ನೀರಿನ ಸಮಸ್ಯೆಯಿರುವ ಪ್ರದೇಶಗಳಲ್ಲಿ ಬೋರ್ ವೆಲ್ ಗಳ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸಬೇಕು. ಹಮ್ಮಿಗಿಯಲ್ಲಿ ನೀರು ಪೂರೈಕೆಯ ಪೈಪ್‌ಲೈನ್ ದುರಸ್ತಿಯಿದ್ದು ರಿಪೇರಿಗಾಗಿ ವಿವರವಾದ ಪ್ರೊಜೆಕ್ಟ್ ತಯಾರು ಮಾಡಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

 ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ್ ಅವರು ಮಾತನಾಡಿ ಅಕಾಲಿಕ ಮಳೆಯಿಂದ ಹಾನಿಗೊಳಗಾದ ತೋಟಗಾರಿಕಾ ಪ್ರದೇಶದ ಸರ್ವೇ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಜನತಾ ದರ್ಶನ ಕಾರ್ಯಕ್ರಮ ದಲ್ಲಿ ಸ್ವೀಕರಿಸಿದ ಅರ್ಜಿ ಶೀಘ್ರವಾಗಿ ವಿಲೇವಾರಿಯಾಗುವಂತೆ ಕ್ರಮ ಕೈಕೊಳ್ಳಬೇಕು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ ಕಂದಾಯ ಇಲಾಖೆಯಲ್ಲಿ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಅರ್ಹ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗಳಿಗೆ ಹಣ ಜಮೆ ಮಾಡಲಾಗುತ್ತಿದೆ. ಸಕಾಲ ಯೋಜನೆಯಡಿ ಸ್ವಿಕೃತ ಅರ್ಜಿಗಳು ನಿಗದಿತ ಕಾಲದಲ್ಲಿಯೇ ವಿಲೇವಾರಿಯಾಗುತ್ತಿದ್ದು ರಾಜ್ಯದಲ್ಲಿಯೇ ಜಿಲ್ಲೆಯು ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾತನಾಡಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 25 ರವರೆಗೆ ವಾಡಿಕೆ ಮಳೆ 467 ಮಿ.ಮೀ ಇದ್ದು ವಾಸ್ತವ ಮಳೆ 424 ಮಿ.ಮೀ ಆಗಿರುತ್ತದೆ. 311771 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ರೈತರಿಗೆ ವಿತರಣೆಗೆ 12504 ಮೆಟ್ರಿಕ್ ಟನ್ ರಸಗೊಬ್ಬರದ ಲಭ್ಯತೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತೋಟಗಾರಿಕೆ, ಶಿಕ್ಷಣ, ಜೆಜೆಎಮ್. ಹೆಸ್ಕಾಮ್ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.

 ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ. ಜಿಲ್ಲಾ ಗ್ಯಾರಂಟಿ ಯೊಜನೆಯ ಸಮಿತಿ ಅಧ್ಯಕ್ಷರಾದ ಬಿ.ಬಿ.ಅಸೂಟಿ, ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧಿಕಾರೇತರ ಸದಸ್ಯರಾದ ಎಸ್.ಎನ್.ಬಳ್ಳಾರಿ, ಪ್ರಭು ಮೇಟಿ, ಎಸ್.ಡಿ.ಮಕಾನದಾರ, ಶಾರದಾ ಹಿರೇಗೌಡರ , ತಾಲೂಕಾ ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *