ಗದಗ ಸೆಪ್ಟೆಂಬರ್ 24 : ಸಾಮಾಜಿಕ ಜಾಲತಾಣಗಳಿಂದ ಹೊರಬಂದು ಯುವ ಜನರು ಆಸಕ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಗದಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಧ್ವಜಾರೋಹಣ ಗೊಳಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಆರೋಗ್ಯ ಸಂಪತ್ತು ಅತ್ಯಮೂಲ್ಯ, ಇಂದಿನ ದಿನಮಾನದಲ್ಲಿ ಎಲ್ಲರಿಗೂ ಕಾಯಿಲೆಗಳು ಹೆಚ್ಚಾಗಿದ್ದು ಇದಕ್ಕೆ ಮೂಲ ಕಾರಣ ನಾವು ದೈಹಿಕವಾಗಿ ಯಾವುದೇ ರೀತಿಯ ಕೆಲಸ ಮಾಡದಿರುವುದು, ಹಾಗಾಗಿ ಯುವ ಜನರು ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡು ದೈಹಿಕ ಮತ್ತು ಮಾನಸಿಕ ವಾಗಿ ಶಕ್ತಿಯುತರಾಗಿ ದೇಶದ ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳಬೇಕು ಎಂದು ಹೇಳಿದರು.
ಕ್ರೀಡೆಯಲ್ಲಿ ಸೋಲು ಗೆಲವು ಸರ್ವೇಸಾಮಾನ್ಯ ಸೋತೆವು ಎಂದು ದುಃಖಿತರಾಗದೇ, ಸೋಲುವುದಕ್ಕೆ ಕಾರಣವನ್ನು ತಿಳಿದು ಪರಾಮರ್ಶೆ ಮಾಡಿ ಮುಂದೆ ಬರುವ ಪಂದ್ಯಗಳಿಗೆ ಉತ್ತಮ ತಯಾರಿ ನಡೆಸಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟ ಆಡಿ, ಗುಂಪು ಆಟದಲ್ಲಿ ಯಾವ ರೀತಿ ಎಲ್ಲರೊಂದಿಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ನೀಡಬೇಕು ಎಂದು ಅರಿತುಕೊಳ್ಳಬೇಕು ಎಂದು ನುಡಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಸಂತೋಷ ತಂದಿದ್ದು, ಕ್ರೀಡಾ ಇಲಾಖೆಯಿಂದ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಬಂದಿರುವ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಗೆದ್ದು, ವಿಭಾಗ ಮಟ್ಟದಲ್ಲಿ ಉತ್ತಮವಾಗಿ ಆಟ ಆಡಿ ರಾಜ್ಯಮಟ್ಟದಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿ ಜಿಲ್ಲೆಗೆ
ಒಳ್ಳೆಯ ಹೆಸರು ತರಬೇಕು ಎಂದು ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಗೊಳಿಸಿದಕ್ಕೆ ಕ್ರೀಡಾ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಪ್ರತಿ ವರ್ಷದಂತೆ ಈ ವರ್ಷವೂ ನಾಡಿನ ಎಲ್ಲಾ ಕ್ರೀಡಾಪಟುಗಳಿಗೆ ಸೂಕ್ತವಾದ ಅವಕಾಶ ಸಿಗಬೇಕು ಎಂದು ಯಾವುದೇ ರೀತಿಯ ವಯಸ್ಸಿನ ಇತಿಮಿತಿ ಹಾಕದೇ ಎಲ್ಲಾ ಕ್ರೀಡೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವನ್ನು ನೀಡಿ ದಸರಾ ಕ್ರೀಡಾ ಕೂಟವನ್ನು ಏರ್ಪಡಿಸಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿನ ಏಳು ತಾಲೂಕುಗಳಲ್ಲಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿ, ಅದರಲ್ಲಿ ಗೆದ್ದವರಿಗೆ ಇಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಆಯೋಜಿಸಿದ್ದು, ಹಾಗೂ ಸಪ್ಟೆಂಬರ್ 28 ರಂದು ಬೆಳಗಾವಿ ವಿಭಾಗ ಮಟ್ಟದ ಹಾಕಿ ಪುಟ್ಬಾಲ್ ಮತ್ತು ಕಬ್ಬಡ್ಡಿ ಕ್ರೀಡಾಕೂಟವೂ ನಮ್ಮ ಜಿಲ್ಲೆಯಲ್ಲಿಯೇ ನಡೆಯುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಸರಿಯಾಗಿ ಆಟ ಆಡಿ ಗೆಲುವನ್ನು ಕಂಡು ಮೈಸೂರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ರೋಣ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರು ಆರ್ ಎಸ್ ನರೇಗಲ್ ಅವರು ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್ ಸಾಬ ಬಬರ್ಚಿ, ವಿವಿಧ ತಾಲೂಕಿನ ದೈಹಿಕ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ವೆಂಕಟೇಶ ಆಲ್ಕೋಡ ಮತ್ತು ತಂಡ ಸಂಗೀತ ಪ್ರಸ್ತುತ ಪಡಿಸಿದರು. ಎಂ.ಎಸ್ ಕುಚಬಾಳ ಕಾರ್ಯಕ್ರಮ ನಿರ್ವಹಿಸಿದರು. ಎಂ.ಡಿ.ತಳ್ಳಳ್ಳ ವಂದಿಸಿದರು.