ಕ್ರಿ.ಶ. 1893 ರಲ್ಲಿ ಅಮೇರಿಕಾದ ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸ್ವಾಮಿ ವಿವೇಕಾನಂದರು “ಅಮೇರಿಕಾದ ಸಹೋದರ ಸಹೋದರಿಯರೇ” ಎಂದು ಸಂಬೋಧಿಸಿದಾಗ ಅಸಂಖ್ಯಾತ ಜನರಿಂದ ಚಪ್ಪಾಳೆಯ ಸುರಿಮಳೆಯಾಯಿತು. ಅವರ ಹೃದಯಸ್ಪರ್ಶಿ ಭಾಷಣ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿತು. ಸಪ್ತ ಸಾಗರದಾಚೆಯೂ ಸಹ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಕೀರ್ತಿ ಪತಾಕೆ ಪಸರಿಸಿತ್ತು ಎಂಬುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ. ವಿವಿಧ ಧರ್ಮಗಳ ನಡುವಿನ ನೆಲೆಗಳನ್ನು ಸೂಚಿಸುವುದರ ಮೂಲಕ ಹಿಂದೂ ಧರ್ಮವನ್ನು ಏಕೀಕರಣಗೊಳಿಸಿದರು. ಪಾಶ್ಚಾತ್ಯ ರಾಷ್ಟçಗಳಲ್ಲಿಯೂ ತಮ್ಮ ಆಳವಾದ ಹಾಗೂ ಆರ್ಥಪೂರ್ಣ ಉಪನ್ಯಾಸಗಳಿಂದ ತಮ್ಮ ಗುರಿ ಸಾಧಿಸಿ ಕೋಟ್ಯಂತರ ಯುವಕರಿಗೆ ಸ್ಪೂರ್ತಿಯ ಸೆಲೆಯಾದರು.
ಆಧುನಿಕ ಯುಗದ ಶ್ರೇಷ್ಠ ಸಂತ, ಮಹಾನ್ ಮೇಧಾವಿ, ಚಿಂತಕರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರು ಜನೆವರಿ 12, 1863 ರಂದು ಕಲ್ಕತ್ತಾದ ಶಿಮ್ಲಾಪಲ್ಲಿಯಲ್ಲಿ ಸಾಂಪ್ರದಾಯಸ್ಥ ಮನೆತನದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ ವಕೀಲರಾಗಿದ್ದರು. ಕಲ್ಕತ್ತಾದ ಹೈಕೋರ್ಟನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಭುವನೇಶ್ವರಿ ದೇವಿ ಧಾರ್ಮಿಕತೆ ಮೇಲೆ ನಂಬಿಕೆವುಳ್ಳವರು ಹಾಗೂ ಕಠಿಣ ಅಭ್ಯಾಸ ಮಾಡಿದ್ದರು. ಇವರ ಮೊದಲ ಹೆಸರು ನರೇಂದ್ರನಾಥ ಎಂದಾಗಿತ್ತು. 1871 ರಲ್ಲಿ ಈಶ್ವರಚಂದ್ರ ವಿದ್ಯಾಸಾಗರ ಅವರ ಮೆಟ್ರೋ ಪಾಲಿಟನ್ ಇನ್ಸಟಿಟ್ಯೂಟ್‌ಗೆ ಸೇರಿದರು. 1879ರಲ್ಲಿ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿಗೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನರೇಂದ್ರನಾಥರು ಓದಿನಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ಅದ್ಭುತ ಸ್ಮರಣಶಕ್ತಿ ಇವರಿಗಿತ್ತು. ರಾಮಕೃಷ್ಣ ಪರಮಹಂಸರ ಪರಮ ಶಿಷ್ಯರಾಗಿದ್ದ ಇವರಿಗೆ ಆಧ್ಯಾತ್ಮಿಕತೆ, ತತ್ವಜ್ಞಾನ, ವೇದಾಂತಗಳನ್ನು ಮೈಗೂಡಿಸಿಕೊಂಡಿದ್ದರು. ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ತಮ್ಮ ಅತ್ಯುನ್ನತ ವಿಚಾರಧಾರೆಯ ಉಪನ್ಯಾಸಗಳಿಂದ ವಿಶ್ವಮಾನವರೆನಿಸಿದರು. ವಿವೇಕಾನಂದರ ಸುಸಂಸ್ಕೃತ ವರ್ತನೆ, ಸುಲಲಿತ ವಾಕ್‌ಪಟುತ್ವ ಆಶ್ಚರ್ಯಕರ ವ್ಯಕ್ತಿತ್ವ ಎಲ್ಲರಲ್ಲೂ ಹೊಸ ಚೈತನ್ಯ ಮೂಡಿಸಿದವು. ಹಿಂದೂ ಧರ್ಮದ ಮಹತ್ವವನ್ನು ಸಾರುವ ಅವರ ಲೇಖನಗಳು ನಿಜಕ್ಕೂ ಅನರ್ಘ ರತ್ನದಂತಿದ್ದವು. ಸ್ವಲ್ಪ ಸಮಯದಲ್ಲೇ ಹಿಂದೂ ಧರ್ಮದ ಸ್ಪಷ್ಟ ಚಿತ್ರಣವನ್ನು ಜಗತ್ತಿಗೆ ತೆರೆದಿಟ್ಟ ಮಹಾನ್ ಸಂತ ಸ್ವಾಮಿ ವಿವೇಕಾನಂದರು.
ನರಸ್ಯಾಭರಣಂ ರೂಪಂ , ರೂಪಸ್ಯಾ ಭರಣಂ ಗುಣಮ್ , ಗುಣಸ್ಯಾ ಭರಣಂ ಜ್ಞಾನಂ ಜ್ಞಾನಸ್ಯಾ ಭರಣಂ ಕ್ಷಮಾ ಎನ್ನುವ ಸಂಸ್ಕೃತ ಸುಭಾಷಿತದಂತೆ ಸ್ವಾಮಿ ವಿವೇಕಾನಂದರು ರೂಪ, ಗುಣ , ಜ್ಞಾನ , ಕ್ಷಮೆ ಎಂಬುವ ಆಭರಣಗಳನ್ನು ಹೊಂದಿದ್ದರು. ಇವರ ವಿವೇಕಯುತ ಮಾತುಗಳು ಭಾರತೀಯ ವೈವಿಧ್ಯಮಯ ಬದುಕಿನ ಮೇಲೆ ಪ್ರಭಾವ ಬೀರಿದವು. ಭಾರತ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಸಂಚರಿಸಿ ಜನಸಮುದಾಯದ ದಾರಿದ್ರö್ಯ ಹಾಗೂ ದೈನಕ್ಕಾಗಿ ಮಮ್ಮಲ ಮರುಗಿದರು. ಮೂರು ವರ್ಷಗಳ ಕಾಲ ಪಾದಚಾರಿಯಾಗಿ ಇಡೀ ಭಾರತ ದೇಶವನ್ನು ಪರ್ಯಟನ ಮಾಡಿದರು.
ತಾಯ್ನಾಡಿಗೆ ಮರುಳಿದ ಸ್ವಾಮಿ ವಿವೇಕಾನಂದರು ಮೇ 1, 1897 ರಂದು ರಾಮಕೃಷ್ಣ ಮಿಷನ್ ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದರು. ಇದರಲ್ಲಿ ವೇದ ತತ್ವಶಾಸ್ತçಗಳ ಅಧ್ಯಯನ ಶಾಲೆ, ಕಾಲೇಜು, ಆಸ್ಪತ್ರೆ , ಹಾಸ್ಟೆಲ್‌ಗಳು, ಗ್ರಾಮೀಣಾಭಿವೃದ್ಧಿ ಕೇಂದ್ರಗಳ ಮೂಲಕ ಸಾಮಾಜಿಕ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು.
ಸಮಾಜದಲ್ಲಿ ಮನೆಮಾಡಿರುವ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂದು ವಿವೇಕಾನಂದರು ತಿಳಿಸಿದರು. ಶಿಕ್ಷಣವೆಂದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುವುದು. ವ್ಯಕ್ತಿತ್ವ ನಿರ್ಮಾಣದಿಂದ ಚಾರಿತ್ರö್ಯ ನಿರ್ಮಾಣವಾಗುತ್ತದೆ. ಚಾರಿತ್ರö್ಯ ನಿರ್ಮಾಣದಿಂದಲೇ ಒಂದು ಬಲಿಷ್ಟ ರಾಷ್ಟç ನಿರ್ಮಾಣವಾಗುತ್ತದೆ ಎಂಬುದು ಸ್ವಾಮಿ ವಿವೇಕಾನಂದರ ಅಭಿಪ್ರಾಯವಾಗಿತ್ತು. ಕೃಷಿಕರಲ್ಲಿ, ಕಾರ್ಮಿಕ ವರ್ಗದಲ್ಲಿ ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಿಸಿದರು.
1902 ರ ಜುಲೈ 4 ರಂದು ಸ್ವಾಮಿ ವಿವೇಕಾನಂದರು ದೈವಾಧೀನರಾದರು. ಕೇವಲ 39.5 ವರ್ಷಗಳ ಕಾಲ ಜೀವಿಸಿದ್ದರೂ ಇದ್ದ ಅಲ್ಪಾವಧಿಯಲ್ಲಿಯೇ ಮಹತ್ಸಾಧನೆ ಮಾಡಿದರು. ಕಂಗೆಟ್ಟವರಿಗೆ ಬೆಳಕಾಗಿ, ವಿಶ್ವದ ಚಿಂತಕರಿಗೆ ಒಳ್ಳೆಯ ದಾರ್ಶನಿಕರಾಗಿ , ಹಿಂದೂ ಸನಾತನ ಧರ್ಮ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಸಾರುವ ಮಾರ್ಗದರ್ಶಕರಾಗಿ , ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟು ಪ್ರತಿಯೊಬ್ಬರಿಗೂ ಆದರ್ಶಪ್ರಾಯರಾಗಿದ್ದಾರೆ. ಭ್ರಷ್ಟಾಚಾರ, ಅಸಮಾನತೆ, ಭಯೋತ್ಪಾದಕತೆಗಳನ್ನು ಹೋಗಲಾಡಿಸಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಇಂದಿನ ಯುವಜನರು ಜೀವನದಲ್ಲಿ ಅಳವಡಿಸಿಕೊಂಡು ಬಲಿಷ್ಟ ರಾಷ್ಟç ನಿರ್ಮಾಣಕ್ಕೆ ಪಣತೊಡಬೇಕಾದ ಅಗತ್ಯತೆ ಇದೆ.
ಸ್ವಾಮಿ ವಿವೇಕಾನಂದರ ಜೀವಿತಾವಧಿ 39.5 ವರ್ಷಗಳಾಗಿದ್ದರಿಂದ ಜಿಲ್ಲೆಯ ನಾಗಾವಿಯ ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ಆವರಣದಲ್ಲಿ 21 ಅಡಿಯ ಸ್ವಾಮಿ ವಿವೇಕಾನಂದರ ಪುತ್ಥಳಿ ಹಾಗೂ ಅದರ ಅಡಿಪಾಯವು ಸೇರಿ ಒಟ್ಟಾರೆ 39.5 ಅಡಿಯ ಸ್ವಾಮಿ ವಿವೇಕಾನಂದರ ಮೂರ್ತಿಯು ಜಗತ್ತಿನ ಎತ್ತರದ ಪುತ್ಥಳಿಗಳ ಸಾಲಿಗೆ ಸೇರಿ ಎಲ್ಲರ ಗಮನ ಸೆಳೆಯಲಿದೆ. ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ ದಿನವಾದ ಸೆಪ್ಟೆಂಬರ್ 11 ರಂದೇ ಅನಾವರಣಗೊಳಿಸುತ್ತಿರುವುದು ಮತ್ತೊಂದು ವಿಶೇಷವಾಗಿದ್ದು ದೇಶಪ್ರೇಮಿಗಳು ಹರ್ಷಪಡುವ ಹಾಗೂ ಹೆಮ್ಮೆಯ ವಿಷಯವಾಗಿದೆ.
ಶ್ರೀಮತಿ ಅಂಜನಾ ರಾಘವೇಂದ್ರ ಕುಬೇರ
ವಾರ್ತಾ ಮತ್ತು ಸಾ.ಸಂ.ಇಲಾಖೆ,ಗದಗ