ಡಂಬಳ: ಹೋಬಳಿಯ ಡೋಣಿತಾಂಡಾ ಗ್ರಾಮದಲ್ಲಿ “ತಾಯಿಯ ಹೆಸರಲ್ಲಿ ಒಂದು ವೃಕ್ಷ” ವಿಶೇಷ ಅಭಿಯಾನದಡಿ ಸಸಿ ನೆಡಲಾಯಿತು. ಈ ವೇಳೆ ಸಸಿ ನೆಟ್ಟು ಮಾತನಾಡಿದ ಮುಂಡರಗಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ,
ತಾಯಿಯ ನಾಮದಲ್ಲಿ ಸಸಿ ನೆಡುವ ಮೂಲಕ ಪರಿಸರ ಬೆಳೆಸುವ ಈ ಅಭಿಯಾನ ಇತಿಹಾಸದಲ್ಲಿ ಉಳಿಯಲಿದೆ. ಅಭಿಯಾನ ಹಾಗೂ ತದನಂತರ ಎಲ್ಲರೂ ತಮ್ಮ ತಮ್ಮ ಮನೆಯೆದುರಯ ಸಸಿ ನೆಡುವ ಮೂಲಕ ನೆಡುತೋಪು ಸೃಷ್ಟಿಸಿ ಪೋಷಣೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು. ತಾಲೂಕಿನ ಪೇಠಾಲೂರಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಹಾಗೂ ಡೋಣಿತಾಂಡಾ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯೊಂದಿಗೆ ನೂರಾರು ಸಸಿಗಳನ್ನುಜ ನೆಡಲಾಯಿತು. ಈ ವೇಳೆ ಡೋಣಿತಾಂಡಾ ಗ್ರಾಮದಲ್ಲಿ ಅವರು ಮಾತನಾಡಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನ ಮಂತ್ರಿಯವರು “ತಾಯಿಯ ಹೆಸರಲ್ಲಿ ಒಂದು ವೃಕ್ಷ” (Ek Ped Maa Ke Naam) ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದೀಗ ನರೇಗಾ ಯೋಜನೆಯಡಿ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಒಗ್ಗೂಡಿಸುವಿಕೆಯೊಂದಿಗೆ ಈ ಅಭಿಯಾನವನ್ನು ತಾಲೂಕಿನ 19 ಗ್ರಾಮ ಪಂಚಾಯತಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ತಾಪಂ, ಗ್ರಾಪಂ, ಶಾಲೆ, ಆಸ್ಪತ್ರೆ, ಕಾಲೇಜು ಆವರಣ ಸೇರಿದಂತೆ ವಿವಿಧ ಸ್ಥಳದಲ್ಲಿ ಏಕಕಾಲಕ್ಕೆ ಸಸಿ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪ್ರಸ್ತುತ ನಗಕರೀಕರಣ, ಕೈಗಾರಿಕರೀಣದಿಂದ ಪರಿಸರ ನಾಶವಾಗುತ್ತಿದೆ. ಇದು ಮನುಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗೆ ಮುಂದುವರೆದರೆ ಶುದ್ಧ ಗಾಳಿ-ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ದೇಶದೆಲ್ಲೆಡೆ ಅರಣ್ಯ ಪ್ರದೇಶ ಅಭಿವೃದ್ಧಿಗೆ ಸಾಕಷ್ಟು ಕ್ರಮವಹಿಸಲಾಗಿದೆ. ಇದೀಗ ಈ ಅಭಿಯಾನದ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟು ಪರಿಸರದ ಕುರಿತು ಜನ ಜಾಗೃತಿ ಮೂಡಿಸುವುದರ ಜೊತೆಗೆ ಅರಣ್ಯ ಪ್ರದೇಶ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹೀಗಾಗಿ ತಾಯಿಯ ಹೆಸರಲ್ಲಿ ನೆಡುತೋಪು ಮಾಡಿರುವ ಈ ಸಸಿಗಳನ್ನು ನಾವೆಲ್ಲರೂ ಪೋಷಣೆ ಮಾಡೋಣ ಎಂದು ಕರೆ ನೀಡಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಂ. ಎಂ. ತಾಂಬೋಟಿ ಮಾತನಾಡಿ, ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಘೋಷ ವಾಕ್ಯ ಕೇವಲ ಘೋಷಣೆಗೆ ಸೀಮಿತವಾಗಬಾರದು. ಮನೆಯಂಗಳದ ಜೊತೆಗೆ ಸುತ್ತಮುತ್ತಲಿನ ಪ್ರದೇಶ ಹಾಗೂ ತಮ್ಮ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು. ಸಸಿಗಳನ್ನು ಮರಗಳನ್ನಾಗಿಸಿದರೆ ಅದರಿಂದ ಸಾಕಷ್ಟು ಪ್ರಯೋಜನಗಳು ಲಭಿಸಲಿವೆ ಎಂದರು.
ಈ ವೇಳೆ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುನೀತಾ, ಪರಿಸರ ಕಾರ್ಯಕರ್ತ ಶಂಕರ ಜಾಯನಗೌಡರ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಮೈಲಾರೆಪ್ಪ, ಸುರೇಶ ಕುಂಬಾರ ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.