20.9 C
New York
Sunday, September 14, 2025

Buy now

spot_img

ಗದಗ : ರೈತರಿಗೆ ಹಗಲು ಹೊತ್ತಿನಲ್ಲೇ ಏಳು ಗಂಟೆ ವಿದ್ಯುತ್‌: ಸಚಿವ ಕೆ.ಜೆ ಜಾರ್ಜ್‌

ಇಂಧನ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ

ಗದಗ, ಸೆ. 10 :  ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿಯೇ ನಿರಂತರ ಏಳು ಗಂಟೆಗಳ ಕಾಲ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕುಸುಮ್‌- ಬಿ ಹಾಗೂ ಕುಸುಮ್‌- ಸಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದರು.

ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯುತ್ ಮಾರ್ಗ ಜಾಲದಿಂದ 500 ಮೀ. ವ್ಯಾಪ್ತಿಯ ಹೊರಗಿರುವ ಪಂಪ್‍ಸೆಟ್‌ಗಳಿಗೆ ಕುಸುಮ್‌- ಬಿ ಯೋಜನೆಯಡಿ ಸೋಲಾರ್‌ ವಿದ್ಯುತ್‌ ಕಲ್ಪಿಸಲಾಗುವುದು. ಈ ಯೋಜನೆಗೆ ನಮ್ಮ ಸರ್ಕಾರದಿಂದ ನೀಡಲಾಗುವ ಸಬ್ಸಿಡಿಯನ್ನು ಶೇ.30 ರಿಂದ ಶೇ 50 ಕ್ಕೆ ಹೆಚ್ಚಳ ಮಾಡಿದೆ. ಅದೇ ರೀತಿ ಕುಸುಮ್- ಸಿ ಯೋಜನೆಯಡಿ ಕೃಷಿ ಫೀಡರ್ ಗಳ ಸೌರೀಕರಣ ಕಾರ್ಯ ನಡೆಯುತ್ತಿದ್ದು, ಇದರಿಂದಾಗಿ ಹಗಲು ವೇಳೆ ರೈತ ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ ಎಂದರು.

2023ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 4.5 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳು ಇದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಿ ಮೂಲ ಸೌರ್ಯ ಒದಗಿಸಲಾಗಿದೆ. ಇನ್ನೊಂದು ವರ್ಷದಲ್ಲಿ ಉಳಿದ ಪಂಪ್ ಸೆಟ್ ಗಳನ್ನೂ ಸಕ್ರಮಗೊಳಿಸುವ ಕಾರ್ಯ ಪೂರ್ಣಗೊಳ್ಳಲಿವೆ. ಇದರ ಜತೆಗೆ ತ್ವರಿತವಾಗಿ ವಿದ್ಯುತ್‌ ಸಂಪರ್ಕ ಪಡೆಯಲು ಬಯಸಿದ ರೈತರಿಗಾಗಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದ್ದೇವೆ. ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್‌ ಜಾಲ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂಗಳಿಂದ ಟ್ರಾನ್ಸ್ ಫಾರ್ಮರ್ ಗಳನ್ನು ನೀಡಲಾಗುತ್ತಿದೆ ಎಂದು ಸಚಿವ ಕೆ ಜೆ ಜಾರ್ಜ್ ತಿಳಿಸಿದರು.

ವಿದ್ಯುತ್‌ ಕೊರತೆಯಿಲ್ಲ :* ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಕೇವಲ ಒಂದು ತಿಂಗಳು ಮಾತ್ರ ವಿದ್ಯುತ್‌ ಕೊರತೆ ಉಂಟಾಗಿತ್ತು. ಉತ್ತರ ಪ್ರದೇಶ ಹಾಗೂ ಪಂಜಾಬ್‌ ರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ವಿದ್ಯುತ್‌ ಪಡೆದು ಸಮಸ್ಯೆ ಬಗೆಹರಿಸಲಾಗಿತ್ತು. ಸದ್ಯ ನಮ್ಮಲ್ಲಿ ವಿದ್ಯುತ್‌ ಕೊರತೆಯಿಲ್ಲ. ರೈತರಿಗೆ ನಿರಂತವಾಗಿ ವಿದ್ಯುತ್‌ ಕಲ್ಪಿಸುವ ಉದ್ದೇಶದಿಂದ ಹೆಚ್ಚು ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಸಮರ್ಪಕ ವಿದ್ಯುತ್ ಪೂರೈಕೆಗಾಗಿ ರಾಜ್ಯದಲ್ಲಿ ಮೂಲ ಸೌಕರ್ಯ ಹೆಚ್ಚಿಸಲಾಗುತ್ತಿದ್ದು, ಕೆಪಿಟಿಸಿಎಲ್ ವತಿಯಿಂದ ಹೊಸದಾಗಿ 100 ವಿದ್ಯುತ್‌ ಉಪಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ವರ್ಷವೂ ಹೆಚ್ಚೆಚ್ಚು ವಿದ್ಯುತ್‌ ಉಪಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಪವನ ಹಾಗೂ ಸೌರ ವಿದ್ಯುತ್‌ನ್ನು ಬ್ಯಾಟರಿ ಮೂಲಕ ಸಂಗ್ರಹ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ರೈತರ ಪಂಪ್‌ಸೆಟ್‌ಗಳಿಗೆ ಸುಲಭ ಮತ್ತು ಸಮಪರ್ಕ ವಿದ್ಯುತ್‌ ಸರಬರಾಜು ದೃಷ್ಟಿಯಿಂದ ಬೇಡಿಕೆ ಇರುವಷ್ಟು ಟ್ರಾನ್ಸ್‌ಫಾರ್ಮರ್ ಗಳನ್ನು ಪೂರೈಸಲಾಗುವುದು. ಇದಕ್ಕಾಗಿ ಟ್ರಾನ್ಸ್‌ಫಾರ್ಮರ್ ಬ್ಯಾಂಕ್‌ ಮಾಡಿದ್ದೇವೆ. ರೈತರಿಗೆ ಹೊರೆಯಾಗದಂತೆ ಇಲಾಖೆಯ ವಾಹನದಲ್ಲಿಯೇ ಟ್ರಾನ್ಸ್‌ಫಾರ್ಮರ್ ಸಾಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

3000 ಪವರ್‌ಮೆನ್‌ಗಳ ನೇಮಕಾತಿ:* ಇಂಧನ ಇಲಾಖೆಯ 3 ಸಾವಿರ ಲೈನ್‍ಮನ್‍ಗಳ ನೇಮಕಾತಿ ಪ್ರಕ್ರಿಯೆ ಇನ್ನೊಂದು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಲೈನ್‌ಮೆನ್‌ಗಳು ಮನಸ್ಸು ಮಾಡಿದರೆ ಏನು ಬೇಕಾದನ್ನು ಸಾಧಿಸಬಹುದು ಎಂಬುದನ್ನು ಅವರು ಈಗಾಗಲೇ ನಿರೂಪಿಸಿದ್ದಾರೆ. ಮಳೆ-ಗಾಳಿಯಿಂದ ಸಮಸ್ಯೆಯಾದಾಗ ತ್ವರಿತವಾಗಿ ಸ್ಪಂದಿಸಿ ವಿದ್ಯುತ್ ಪೂರೈಕೆ ಪುನಃಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೃಹ ಜ್ಯೋತಿ 99% ಸಾಧನೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗೃಹ ಜ್ಯೋತಿ ರಾಜ್ಯದಲ್ಲಿ ಶೇ. 99ರಷ್ಟು ಸಾಧನೆಯಾಗಿದೆ. ಗದಗ ಜಿಲ್ಲೆಯಲ್ಲಿ ಒಟ್ಟು ಶೇ. 98.49ರಷ್ಟು ಸಾಧನೆ ಮಾಡಲಾಗಿದೆ. ಗದಗ ನಗರದಲ್ಲಿ ಶೇ. 99.47, ಗ್ರಾಮೀಣ ಭಾಗದಲ್ಲಿ ಶೇ. 99.45ರಷ್ಟು ಸಾಧನೆಯಾಗಿದೆ ಇದು ಹೆಮ್ಮಪಡುವ ವಿಷಯ ಎಂದರು.

*ರೈತರಿಗೆ ಶೇ. 10 ಪಾಲುದಾರಿಕೆಗೆ ಮನವಿ*

ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ.ಪಾಟೀಲ ಅವರು ಮಾತನಾಡಿ, ಗದಗ ಜಿಲ್ಲೆಯಲ್ಲಿ ಪವನ ಹಾಗೂ ಸೌರ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಅವಕಾಶ ಇದೆ. ಇದರ ಲಾಭ ಇಲ್ಲಿನ ರೈತರಿಗೆ ಸಿಗುವಂತಾಗಬೇಕು. ಈ ಯೋಜನೆಗಳಿಗೆ ಜಮೀನು ನೀಡುವ ರೈತರಿಗೆ ಯೋಜನೆಯಲ್ಲಿ ಶೇ. 10ರಷ್ಟು ಪಾಲುದಾರಿಕೆ ನೀಡಬೇಕು. ವಿದ್ಯುತ್‌ ಉತ್ಪಾದಿಸುವ ಉತ್ತರ ಕನ್ನಡ ಜಿಲ್ಲೆಗೆ ಈ ಹಿಂದೆ ಕೆಲವು ರಿಯಾಯತಿ ನೀಡಲಾಗುತ್ತಿತ್ತು. ಅದೇ ರೀತಿ ಗದಗ ಜಿಲ್ಲೆಗೂ ರಿಯಾಯತಿ ಸಿಗಬೇಕು ಎಂದರು.

ಗದಗ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಳೆಯಿಂದಾಗಿ ಕೆಲವೆಡೆ ವಿದ್ಯುತ್‌ ಕಂಬ, ತಂತಿಗಳು ವಾಲಿವೆ. ಅವುಗಳನ್ನು ಸರಿಪಡಿಸಬೇಕು. ಪರೀಕ್ಷಾ ಸಂದರ್ಭದಲ್ಲಿ ರಾತ್ರಿ ಹೊತ್ತಿನಲ್ಲಿ ವಿದ್ಯುತ್‌ ನೀಡಬೇಕು ಎಂದು ನರಗುಂದ ಶಾಸಕ ಸಿ.ಸಿ ಪಾಟೀಲ ಹೇಳಿದರು.

ರೋಣ ಶಾಸಕ ಜಿ.ಎಸ್‌ ಪಾಟೀಲ ಮಾತನಾಡಿ, ರಾತ್ರಿ ಹೊತ್ತಿನಲ್ಲಿ ತೋಟದ ಮನೆಗಳಿಗೆ ಸಿಂಗಲ್ ಫೇಸ್‌ ನಿರಂತರ ವಿದ್ಯುತ್‌ ನೀಡಬೇಕು. 24 ಗಂಟೆಯೊಳಗೆ ರೈತರಿಗೆ ಟ್ರಾನ್ಸ್‌ಫಾರ್ಮರ್ ಸಿಗುವಂತಾಗಬೇಕು ಎಂದರು.

ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಫೀರ್ ಎಸ್. ಖಾದ್ರಿ, ಕೆ.ಪಿ.ಟಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ ಪಾಂಡೆ, ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ ಸೇರಿದಂತೆ ಹೆಸ್ಕಾಂ, ಕೆ.ಪಿ.ಟಿ.ಸಿ.ಎಲ್‌ ಅಧಿಕಾರಿಗಳು ಇದ್ದರು. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ಅವರು ಅತಿಥಿಗಳನ್ನು ಸ್ವಾಗತಿಸಿ, ಸಭೆ ನಿರ್ವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ತರಬೇತಿ ಗದಗ : ಅರಣ್ಯ ಸಂರಕ್ಷಕರು ನಾಡಿನ ಹಸಿರಿನ ಹರಿಕಾರರು : ನ್ಯಾ. ಗಂಗಾಧರ ಎಂ.ಸಿ ಗದಗ : ರೈತರಿಗೆ ಹಗಲು ಹೊತ್ತಿನಲ್ಲೇ ಏಳು ಗಂಟೆ ವಿದ್ಯುತ್‌: ಸಚಿವ ಕೆ.ಜೆ ಜಾರ್ಜ್‌ ಗದಗ : ಜಿಲ್ಲಾ ಮಟ್ಟದ ಮ್ಯಾರಾಥಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಗದಗ : ಅಕ್ರಮ ಗಣಿಗಾರಿಕೆ ಸಂಪತ್ತು ವಸೂಲಾತಿ ಆಯುಕ್ತರ ನೇಮಕಕ್ಕೆ ಸರ್ಕಾರ ಗೆಜೆಟ್ : ಸಚಿವ ಎಚ್ ಕೆ ಪಾಟೀಲ ಗದಗ : ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಪೂರ್ವ ಮುಂಗಾರು: ಅತೀ ವೃಷ್ಟಿಯಿಂದಾದ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ, ವರದಿ ಸಲ್ಲಿಸಲು ಸೂಚನೆ ಗದಗ : ಸೆಪ್ಟೆಂಬರ್ 13 ರಂದು  ರಾಷ್ಟ್ರೀಯ ಲೋಕ ಅದಾಲತ್ : ಪ್ರಕರಣಗಳ ಇತ್ಯರ್ಥಕ್ಕೆ ಸುವರ್ಣಾವಕಾಶ ಗದಗ : ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ನೂತನ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಪದಗ್ರಹಣ ಸಮಾರಂಭ ಗದಗ : ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ