ಗದಗ ೧೮ : ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ವತಿಯಿಂದ (ಸಿಐಟಿಯು) ಸಂಯೋಜಿತ ಗ್ರಾಮ ಪಂಚಾಯತ ನೌಕರರ ೧೯ ಬೇಡಿಕೆಗಳನ್ನು ಈಡೇರಿಸುವಂತೆ ಈ ಹಿಂದೆ ಎರಡು ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನೌಕರರು ಆಗಮಿಸಿ ತೀವೃವಾದ ಹೋರಾಟ ನಡೆಸಿದ್ದೇವು. ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಕರ್ನಾಟಕ ಪಂಚಾಯತ ರಾಜ್ ಆಯುಕ್ತಾಲಯ ಈ ಮೂವರು ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು, ಆಯುಕ್ತರುಗಳು ಹೋರಾಟದ ಮನವಿ ಸ್ವೀಕರಿಸಿದರು. ಸಚಿವರು ಕೂಡಾ ಆಗಮಿಸಿದ್ದರು. ಈ ೧೯ ಬೇಡಿಕೆಗಳನ್ನು ಗ್ರಾಮೀಣಾಭಿವೃದ್ಧಿ ಸಚಿವರಾದ ಮಾನ್ಯ ಶ್ರೀ ಪ್ರಿಯಾಂಕ ಖರ್ಗೆಯವರು ದೂರವಾಣಿಯ ಮುಖಾಂತರ ಮಾತನಾಡಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಎಲ್ಲಾ ಸಚಿವರು ಇಲ್ಲೆ ಇರುವುದರಿಂದ ನಿಮ್ಮ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಲಾಗುವುದಿಲ್ಲವೆಂದು ಧರಣಿಯನ್ನು ಹಿಂತೆಗೆದುಕೊಳ್ಳಬೇಕು ಒಂದು ವಾರದಲ್ಲಿ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು.
ಇಲ್ಲಿಯವರೆಗೆ ಸರ್ಕಾರ ಯಾವುದೇ ಬೇಡಿಕೆಗಳನ್ನು ಈಡೇರಿಸುವುದಿಲ್ಲ. ಬೇಡಿಕೆಗಳಾದ ಗ್ರಾಮ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ ಕ್ಲರ್ಕ, ಡಾಟಾ ಎಂಟ್ರಿ ಆಪರೇಟರ್, ನೀರು ಗಂಟೆಗಳು, ಜವಾನ್, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ಗ್ರಾಮ ಪಂಚಾಯತಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ ರೂ. ೬೦೦೦ ಪಿಂಚಣಿ ವ್ಯವಸ್ಥೆ ತರಬೇಕು. ಕನಿಷ್ಠ ವೇತನ ೩೧,೦೦೦ ಏರಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು. ಗ್ರೇಡ್ -೧ ಪಂಚಾಯತಿಗಳನ್ನು ಜನಸಂಖ್ಯೆಗೆ ಆಧರಿಸಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಕಳೆದ ಎರಡು ವರ್ಷಗಳಲ್ಲಿ ಸೇವಾ ನಿವೃತ್ತಿ ಹೊಂದಿರುವ ಸಿಬ್ಬಂದಿಗಳಿಗೆ ಹಲವಾರು ಗ್ರಾಮ ಪಂಚಾಯತಿಗಳಲ್ಲಿ ನಿವೃತ್ತಿ ಉಪದಾನ ನೀಡಬೇಕು. ತಾಲೂಕ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಸಭೆಗಳಲ್ಲಿ ಭಾಗವಹಿಸುವ ಬಿಲ್ ಕಲೆಕ್ಟರ್ ಹಾಗೂ ಡಾಟಾ ಎಂಟ್ರಿ ಆಪರೇಟರ ಸಿಬ್ಬಂದಿಗೆ ಸಾರಿಗೆ ಭತ್ಯೆ ಹಾಗೂ ದಿನಭತ್ಯೆ ನೀಡಬೇಕು ಸೇರಿದಂತೆ ಒಟ್ಟು ೧೯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಗದಗ ಇವರ ಮುಖಾಂತರ ಮಾನ್ಯ ಮುಖ್ಯ ಕಾರ್ಯದರ್ಶಿಗಳು ಬೆಂಗಳೂರು ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರು, ಸಿಐಟಿಯು ಕಾರ್ಯಕರ್ತರು, ಗ್ರಾಮ ಪಂಚಾಯತ ನೌಕರರು, ಕಾರ್ಮಿಕ ಮುಖಂಡರಾದ ಮಹೇಶ ಹಿರೇಮಠ, ಮಾರುತಿ ಚಿಟಗಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಗದಗ ಜಿಲ್ಲಾಧ್ಯಕ್ಷ ಬಸವರಾಜ ಮಂತೂರ, ಪ್ರಧಾನ ಕಾರ್ಯದರ್ಶಿ ರುದ್ರಪ್ಪ ಕಂದಗಲ್ಲ, ಮಹೇಶ ದೊಡ್ಡವಾಡ, ಬಸವರಾಜ ಮೇವುಂಡಿ, ಈಶ್ವರ ದಮಾನಿ, ಬಸವರಾಜ ಅರ್ಕಸಾಲಿ, ಮಹಾಲಿಂಗಪ್ಪ ಮುತಾರಿ, ಪ್ರಕಾಶ ನರೇಗಲ್ಲ, ಶಿವಾನಂದ ಚಲವಾದಿ, ರುದ್ರಪ್ಪ ಐನಾಪೂರ, ಮುತ್ತಪ್ಪ ಅರಹುಣಸಿ, ರಮೇಶ ವಾಸನ, ಮಹೇಶ ಮೂಲಿಮನಿ, ನಾಗರಾಜ ಕಣಗಲ್, ಜಗದೀಶ ವಾಲ್ಮೀಕಿ, ಸತೀಶ ಡೊಳ್ಳಿನ, ಪ್ರಭು ಪೂಜಾರ, ಬಸಮ್ಮ ಮಲ್ಲಾಡದ, ಸುಜಾತ ದೊಡ್ಡಮನಿ ಸೇರಿದಂತೆ ಗ್ರಾಮ ಪಂಚಾಯತ ನೌಕರರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು