ಗದಗ : ಫೆಬ್ರುವರಿ ೫: ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಅವರ ನಿರ್ದೇಶನದಂತೆ ಕರ್ನಾಟಕ ಲೋಕಾಯುಕ್ತ, ಗದಗ ಕಛೇರಿಯ ಪೊಲೀಸ್ ಅಧಿಕಾರಿಗಳು ಫೆಬ್ರುವರಿ ೧೨ ರಂದು ಬೆ ೧೦.೩೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ತಹಶೀಲ್ದಾರ ಕಛೇರಿ ಸಭಾ ಭವನ ಶಿರಹಟ್ಟಿದಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸದರಿ ದಿನಾಂಕದಂದು ಸಾರ್ವಜನಿಕರಿಂದ ದೂರು/ಅಹವಾಲುಗಳನ್ನು ಸ್ವೀಕರಿಸಲಾಗುವುದು.
ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು, ಅಹವಾಲುಗಳನ್ನು ಹಾಗೂ ತಮ್ಮ ಸರಕಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿರುವ ಬಗ್ಗೆ ಲಿಖಿತ ದೂರನ್ನು ದಾಖಲಿಸಬಹುದು. ಸರಕಾರಿ ಅಧಿಕಾರಿಗಳು ಸರಕಾರದ ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಉದ್ದೇಶಪೂರ್ವಕ ತಾರತಮ್ಯ ಮಾಡುತ್ತಿರುವ ಬಗ್ಗೆ ಲಿಖಿತ ದೂರನ್ನು ದಾಖಲಿಸಬಹುದಾಗಿದೆ.
ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬ, ಕಳಪೆ ಕಾಮಗಾರಿ ನಡೆಸಿ ಹಣ ದುರುಪಯೋಗ ಪಡಿಸಿದ ದೂರುಗಳ ಬಗ್ಗೆ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಮಾಡಿಕೊಡದೆ, ಅಕ್ರಮ ಸಂಭಾವನೆ (ಲಂಚದ ಹಣ)ಯ ಸಲುವಾಗಿ ಅನಗತ್ಯ ವಿಳಂಬ ಮಾಡುತ್ತಿದ್ದರೆ ಲಿಖಿತ ದೂರನ್ನು ದಾಖಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಗದಗ ಆರಕ್ಷಕ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.