ಗದಗ : ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳಿಗೆ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ಲಕ್ಕಲಟ್ಟಿ ಗ್ರಾಮದ ರಮೇಶ್ ಮಾದರ, ಮತ್ತು ಗಂಗಮ್ಮ ರಾಥೋಡ್ ಎಂಬುವವರು ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು.
ಇಬ್ಬರು ಬೇರೆ ಬೇರೆ ಜಾತಿಯಾಗಿದ್ದರಿಂದ ವಿವಾಹಕ್ಕೆ ಎರಡು ಕುಟುಂಬ ಅಡ್ಡಿಯಾಗಿದ್ದರು.
ಆದರೂ ಕೂಡ ರಮೇಶ್ ಹಾಗೂ ಗಂಗಮ್ಮ ಮದುವೆಯಾಗಿದ್ದರು ಇದರಿಂದ ಸಿಟ್ಟಾದ ಕುಟುಂಬಸ್ಥರು ನ.6 2019ರಂದು ನಡುರಸ್ತೆಯಲ್ಲಿ ಚಾಕುವಿನಿಂದ ಚುಚ್ಚಿ, ಕಲ್ಲು ದೊಣ್ಣೆಯಿಂದ ಹೊಡೆದು ಇಬ್ಬರನ್ನೂ ಕೊಲೆ ಮಾಡಿದ್ದರು. ಈ ಪ್ರಕರಣದ ಸಂಬಂಧ ಗಜೇಂದ್ರಗಢ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೂಪ ಪಟ್ಟಿ ಸಲ್ಲಿಸಿದ್ದರು.
ಅದರಂತೆ ವಿಚಾರಣೆ ನಡೆಸಿದ ಪೀಠವು ಶಿವಪ್ಪ ರಾಥೋಡ್, ರವಿ ಕುಮಾರ್ ರಾಥೋಡ್, ರಮೇಶ್ ರಾಥೋಡ್, ಹಾಗೂ ಸಾರಿಗೆ ಇಲಾಖೆಯ ಚಾಲಕ ಪರಶುರಾಮ ರಾಥೋಡ್ ಅವರ ಮೇಲಿನ ಆರೋಪ ಸಾಬೀತಾದ ಹಿನ್ನಲೆ ಮರಣದಂಡನೆಗೆ ಶಿಕ್ಷೆ ನೀಡಿ ಆದೇಶಿಸಿದೆ.