ಅತೀ ಚಿಕ್ಕ ವಯಸ್ಸಿನಲ್ಲಿ ರಂಗೋಲಿ ಬಿಡಿಸುವಲ್ಲಿ ಕರಗತ
ಗದಗ : ತಾಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ಐದು ವರ್ಷದ ಬಾಲಪ್ರತಿಭೆ ರುತ್ವಿಕಾ ಸೋಮೇಶ್ವರ ಬಿದರೂರ ೨೦೨೪ನೇ ಸಾಲಿನ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಭಾಜನಳಾಗಿದ್ದಾಳೆ.
ಅತೀ ಚಿಕ್ಕ ವಯಸ್ಸಿನಲ್ಲಿ ನೆಲದ ಮೇಲೆ ಚಿತ್ತಾರದ ರಂಗೋಲಿ ಬಿಡಿಸುವ ಕಲೆ ಹೊಂದಿರುವ ರುತ್ವಿಕಾಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಒಲಿದು ಬಂದಿದೆ.
ಚುಕ್ಕಿ ರಂಗೋಲಿಯಲ್ಲಿ ದೀಪ, ಗಣೇಶ, ವಿವಿಧ ಹೂಗಳು ಸೇರಿ ೧೫ರಿಂದ ೨೦ ವಿವಿಧ ತರಹದ ರಂಗೋಲಿಯನ್ನು ಬಿಡಿಸುವ ರುತ್ವಿಕಾ ತನ್ನ ತಾಯಿ ಪ್ರಿಯಾ ಅವರಿಂದ ಪ್ರೇರಣೆ ಪಡೆದು ಅತೀ ಚಿಕ್ಕ ವಯಸ್ಸಿನಿಂದಲೇ ರಂಗೋಲಿ ಬಿಡಿಸುವ ಆಸಕ್ತಿ ಹೊಂದಿದ್ದಳು.
ಈ ಹಿನ್ನೆಲೆಯಲ್ಲಿ ರುತ್ವಿಕಾ ತಂದೆ-ತಾಯಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ರುತ್ವಿಕಾ ರಂಗೋಲಿ ಚಿತ್ರ ಬಿಡಿಸುತ್ತಿರುವ ದೃಶ್ಯಾವಳಿಗಳನ್ನು ಕಳುಹಿಸಿದ್ದರು. ದೃಶ್ಯಾವಳಿಗಳನ್ನು ಪರಿಗಣಿಸಿ ರುತ್ವಿಕಾ ಬಿದರೂರ ವಿದ್ಯಾರ್ಥಿನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ.