ಗದಗ : ಮಾರ್ಚ್, 07: ವಿವಿಧಡೆ ಕಳ್ಳತನವಾಗಿದ್ದ ಸುಮಾರು 295 ಮೊಬೈಲ್‌ಗಳನ್ನು ಹೊಸ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ತೆಹಚ್ಚಿದ ಮೊಬೈಲ್‌ಗಳನ್ನು ಸೋಮವಾರ ಪುನಃ ಆಯಾ ಮಾಲೀಕರಿಗೆ ಒಪ್ಪಿಸಿದರು. ಕಳೆದುಕೊಂಡಿದ್ದ ಮೊಬೈಲ್‌ಗಳು ಮತ್ತೆ ತಮ್ಮ ಕೈಸೇರುತ್ತಿದ್ದಂತೆಯೇ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದರು.
ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ಮಾಲೀಕರು ಧನ್ಯವಾದ ಹೇಳಿದರು.
ಜಿಲ್ಲೆಯ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧಡೆ ಈ ಮೊಬೈಲ್‌ಗಳು ಕಳ್ಳತನವಾಗಿದ್ದವು. “ಕೇಂದ್ರ ಸರ್ಕಾರದ ಸಿ.ಇ.ಐ.ಆರ್ ಮತ್ತು ಮೋಬಿಫೈ” ಆಯಪ್‌ಗಳ ಮೂಲಕ ಕ್ಷಿಪ್ರವಾಗಿ ಪತ್ತೆ ಮಾಡಲಾಯಿತು. ಪತ್ತೆಯಾದ ಮೊಬೈಲ್‌ಗಳ ಮೌಲ್ಯ ಸುಮಾರು 4,097,461 ರೂ. ಎಂದು ಅಂದಾಜು ಮಾಡಲಾಗಿದೆ.
295 ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಪೊಲೀಸರು
ಸಾವಿರಾರು ರೂಪಾಯಿ ಬೆಲೆ ತೆತ್ತು ಮೊಬೈಲ್ ಖರೀದಿ ಮಾಡಿದ್ದ ಸಾರ್ವಜನಿಕರು, ಅವುಗಳ ಜೊತೆಗೆ ಮೌಲ್ಯವಾದ ದಾಖಲೆ, ದತ್ತಾಂಶಗಳನ್ನು ಕೂಡ ಕಳೆದುಕೊಂಡಿದ್ದರು. ಹಲವರು ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಠಾಣೆಗೂ ಅಲೆದಾಡಿದ್ದರು. ಕೊನೆಗೆ ಸಿಗದೇ ಇದ್ದುದರಿಂದ ಮೊಬೈಲ್‌ಗಳ ಮೇಲಿನ ಆಸೆಯನ್ನು ಕೈಬಿಟ್ಟಿದ್ದರು.
ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದು ಹೇಗೆ?
ಇತ್ತೀಚೆಗೆ ಪರಿಚಯ ಮಾಡಲಾಗಿರುವ ಕೇಂದ್ರ ಸರ್ಕಾರದ ಸಿ.ಇ.ಐ.ಆರ್ ಮತ್ತು ಮೋಬಿಫೈ ನೂತನ ತಂತ್ರಜ್ಞಾನದ ಮೂಲಕ ಅವುಗಳನ್ನು ಮತ್ತೆ ಪತ್ತೆ ಮಾಡಿದ್ದಲ್ಲದೆ ಮಾಲೀಕರಿಗೂ ಒಪ್ಪಿಸಲಾಯಿತು. ಸಾಮಾನ್ಯರು ಸೇರಿದಂತೆ ವೈದ್ಯರು, ಲಾಯರ್, ಪತ್ರಕರ್ತರು ಸಹ ಮೊಬೈಲ್ ಕಳೆದುಕೊಂಡು ಚಿಂತೆಗೀಡಾಗಿದ್ದರು.
ಸದ್ಯ ಪುನಃ ಮೊಬೈಲ್ ತಮ್ಮ ಕೈ ಸೇರಿದ್ದಕ್ಕೆ ಪೊಲೀಸರಿಗೆ ಧನ್ಯವಾದ ತಿಳಿಸಿದರು. ಖದೀಮರು ಜಾತ್ರೆ, ಸಂತೆ, ಬಸ್ ನಿಲ್ದಾಣ ಹೀಗೆ ವಿವಿಧ ಜನನಿಬಿಡ ಪ್ರದೇಶದಲ್ಲಿ ಅತೀ ಕಡಿಮೆ ಹಣಕ್ಕೆ ಅಂಗಡಿಗಳಲ್ಲಿ ಮೊಬೈಲ್‌ಗಳನ್ನು ಮಾರಿ ಪರಾರಿಯಾಗಿದ್ದರು.