ಗದಗ : ಮೊಬೈಲ್ ಕಳೆದುಕೊಂಡರೆ ಇನ್ನು ಮುಂದೆ ಹೆದರಬೇಕಿಲ್ಲ.. ಯಾಕೆ ಗೊತ್ತಾ?

ಗದಗ ಪೊಲೀಸ್​ ಇಲಾಖೆಯಿಂದ ಮೊಬಿಫೈ ಆಯಪ್​ ಸಿದ್ಧ- ಕಳೆದು ಹೋದ ಮೊಬೈಲ್​ ಹುಡುಕಲು ತಾಂತ್ರಿಕ ವ್ಯವಸ್ಥೆ – ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಮಾಹಿತಿ ನೀಡಿದರು.

ಗದಗ: “ಮೊಬೈಲ್ ಕಳೆದುಕೊಂಡರೆ ಇನ್ನು ಮುಂದೆ ಹೆದರಬೇಕಿಲ್ಲ. ಕಳೆದುಹೋದ ಮೊಬೈಲ್​ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ನಮ್ಮ ಪೊಲೀಸ್ ಇಲಾಖೆಯಿಂದ ಮಾಡಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ತಿಳಿಸಿದರು.

ಈ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಬೈಲ್ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? ಎಂಬ ಕೆಲವು ಮಾಹಿತಿಯನ್ನು ನೀಡಿದರು.

“ಇಲಾಖೆಯು ‘ಮೊಬಿಫೈ (MobiFi)’ ಎಂಬ ಹೊಸದೊಂದು ಆಯಪ್ ಸಿದ್ದಪಡಿಸಿದ್ದು ತಂತ್ರಾಂಶದ ಮೂಲಕ ಕಳೆದು ಹೋದ ಮೊಬೈಲ್ ಅನ್ನು ಪತ್ತೆ ಮಾಡಬಹುದು. ಆದರೆ, ಇದಕ್ಕೆ ಕೆಲವು ಪ್ರಕ್ರಿಯೆಗಳಿದ್ದು, ಅವುಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ. ಮೊಬೈಲ್ ಕಳೆದುಕೊಂಡ ತಕ್ಷಣ ಯಾರೂ ಕೂಡ ಪೊಲೀಸ್ ಠಾಣೆಗೆ ಹೋಗಬೇಕೆಂದಿಲ್ಲ. ಇದ್ದ ಜಾಗದಿಂದಲೇ ಕೆಲವು ಮಾಹಿತಿಯನ್ನು ಆಯಪ್​ನಲ್ಲಿ ಭರ್ತಿ ಮಾಡಿದರೆ ಸಾಕು. ಸುಲಭವಾಗಿ ನಿಮ್ಮ ಮೊಬೈಲ್ ಮತ್ತೆ ನಿಮ್ಮ ಕೈ ಸೇರಬಹುದು” ಎಂದು ತಿಳಿಸಿದರು.

ಮೊಬೈಲ್ ಕಳೆದುಕೊಂಡ ತಕ್ಷಣ ನೀವೇನು ಮಾಡಬೇಕು?:

“ಬೇರೆಯವರ ಅಥವಾ ಸಂಬಂಧಿಕರ ಮೊಬೈಲ್ ಮೂಲಕ ಪೊಲೀಸ್ ಇಲಾಖೆಯ 8277969900 ಈ ನಂಬರ್​ಗೆ Hi ಅಂತ ಮೆಸೇಜ್ ಕಳುಹಿಸಬೇಕು. ತಕ್ಷಣವೇ ಮೊಬೈಲ್ ವಾಟ್ಸ್​ಆಯಪ್​​ಗೆ ಒಂದು ಲಿಂಕ್ ಸಂದೇಶ ಬರುತ್ತದೆ. ಆ ಲಿಂಕ್ ಅನ್ನು ಓಪನ್ ಮಾಡಿ ತಮ್ಮ ಕಳೆದುಹೋದ ಮೊಬೈಲ್ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಯನ್ನು ಪೂರ್ತಿಯಾಗಿ ಭರ್ತಿ ಮಾಡಬೇಕು. ಆಗ ಭರ್ತಿಯಾದ ಮಾಹಿತಿ ಮೇರೆಗೆ ದೂರು ದಾಖಲಾಗುತ್ತದೆ. ಈ ದೂರು ಪ್ರಕಾರ ಕಳೆದುಹೋದ ಮೊಬೈಲ್ ಅನ್ನು ಕೆಲವು ತಂತ್ರಾಂಶದ ಪ್ರಕ್ರಿಯೆ ಮೂಲಕ ಹುಡುಕಿಕೊಡಲಾಗುವುದು. ಒಂದು ವೇಳೆ ಪತ್ತೆಯಾಗದೇ ಇದ್ದಲ್ಲಿ ಆ ಮೊಬೈಲ್ ಅನ್ನೇ ಬ್ಲಾಕ್ ಮಾಡಲಾಗುತ್ತದೆ. ಇದು ರಾಜ್ಯದಲ್ಲಿಯೇ ಗದಗ ಪೊಲೀಸರಿಂದ ಹೊಸದೊಂದು ಪ್ರಯೋಗವಾಗಿದೆ” ಎಂದು ಹೇಳಿದರು.”ಜಿಲ್ಲೆಯಲ್ಲಿ ಆಗಾಗ ಮೊಬೈಲ್ ಕಳೆದುಕೊಂಡ ಮತ್ತು ಕಳ್ಳತನವಾದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇನ್ನು ಮುಂದೆ ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿಯೇ ದೂರು ನೀಡಬೇಕು ಅಂತೇನಿಲ್ಲ. ತಾವು ಇದ್ದ ಜಾಗದಿಂದಲೇ ಕೆಲವು ಕ್ರಮಗಳನ್ನು ಪಾಲಿಸಿದರೆ ಸಾಕು. ಇದೊಂದು ಹೊಸ ಪ್ರಯತ್ನವಾಗಿದ್ದು, ಸದ್ಯ ಗದಗ ಜಿಲ್ಲೆಯಲ್ಲಿ ಮಾತ್ರ ಈ ವಿನೂತನ ಪ್ರಯೋಗವನ್ನು ನಡೆಸಲಾಗುತ್ತಿದೆ. ಇದರ ಕಾರ್ಯವಿಧಾನ ಮತ್ತು ಸಾಧಕ – ಭಾದಕಗಳ ಬಳಿಕ ಈ ಆಯಪ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ” ಎಂದು ನುಡಿದರು.

ಇನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ತಂತ್ರಾಂಶದ ಕ್ರಮ ಕೈಗೊಂಡ ಗದಗ ಪೊಲೀಸ್ ಇಲಾಖೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಆಯಪ್​ ಅನ್ನು ರಾಜ್ಯದ ಎಲ್ಲಾ ಕಡೆಗಳಲ್ಲೂ ಬಳಸುವಂತೆ ನೋಡಿಕೊಂಡಲ್ಲಿ ಮೊಬೈಲ್​ ಕಳ್ಳತನದ ಪ್ರಕರಣ ಮತ್ತಷ್ಟು ಕಡಿಮೆಯಾಗಬಹುದು. ಅಲ್ಲದೇ ಜನರಿಗೆ ಪೊಲೀಸ್​ ಠಾಣೆಯ ಮೆಟ್ಟಿಲೇರುವ ಪ್ರಸಂಗವು ತಪ್ಪಬಹುದು.

Leave a Reply

Your email address will not be published. Required fields are marked *