ಗದಗ : ನಗರದ ಐತಿಹಾಸಿಕ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ತಾರಕಕ್ಕೇರಿದೆ . ಮಠದ ಅಂಗಳದಲ್ಲಿಯೇ ಇಂದು ಹಿರಿಯ ಮತ್ತು ಕಿರಿಯ ಶ್ರೀಗಳ ಪರ ಭಕ್ತರು ಜಟಾಪಟಿ ನಡೆಸಿರುವ ಪ್ರಸಂಗ ನಡೆದದ್ದು ವಿವಾದದ ಹಿಂದಿನ ಗುಟ್ಟು ಈಗ ಹೊರಬಿದ್ದಂತಾಗಿದೆ .
ಮಠದ ಹಿರಿಯ ಶ್ರೀ ಅಭಿನವ ಶ್ರೀಗಳು ಬುಧವಾರ ಸುದ್ದಿಗೋಷ್ಠಿ ನಡೆಸಿ ಕಿರಿಯ ಶ್ರೀ ಕೈವಲ್ಯಾನಂದ ಶ್ರೀಗಳನ್ನ ಉತ್ತರಾಧಿಕಾರಿ ಸ್ಥಾನದಿಂದ ನಾವು ಕೆಳಗಿಳಿಸಿದ್ದೇವೆ . ಮಠದ ಆಡಳಿತ ವ್ಯವಹಾರ ಮತ್ತು ಜಾತ್ರಾಮಹೋತ್ಸವಗಳೆಲ್ಲವೂ ನಾನೇ ನಿರ್ವಹಣೆ ಮಾಡಬೇಕು ಅನ್ನೋ ಕೋರ್ಟ್ ಆದೇಶವೂ ಸಹ ನೀಡಿದೆ ಅಂತ ಹೇಳಿಕೆ ನೀಡಿದ್ದರು .
ಇದರ ಬೆನ್ನಲ್ಲೆ ಇಂದು ಕಿರಿಯ ಶ್ರೀ ಕೈವಲ್ಯಾನಂದ ಸ್ವಾಮೀಜಿ ಕೂಡ ಸುದ್ದಿಗೋಷ್ಠಿ ಕರೆದಿದ್ದರು . ಆದರೆ , ಮಠದಲ್ಲಿ ಕಿರಿಯ ಶ್ರೀ ಯಾವುದೇ ಕಾರ್ಯಕ್ರಮ ಮಾಡುವ ಹಾಗೆ ಇಲ್ಲಾ ಅಂತ ಹಿರಿಯ ಶ್ರೀ ಅಭಿನವ ಶ್ರೀಗಳ ನೇತೃತ್ವದಲ್ಲಿ ಕೆಲವು ಭಕ್ತರು ಅಡ್ಡಿಪಡಿಸಲು ಯತ್ನಿಸಿದ್ದರು . ನ್ಯಾಯಾಲಯ ದಲ್ಲಿ ತಮ್ಮ ಉತ್ತರಾಧಿಕಾರಿ ವಿವಾದ ವಿಚಾರವಾಗಿ ದಾವೆ ಹೂಡಿದಾಗ ಕೋರ್ಟ್ ನಿಮ್ಮ ಆರೋಪಗಳನ್ನು ತಿರಸ್ಕರಿಸಿದೆ . ತೀರ್ಪು ನಮ್ಮಂತೆ ಬಂದಿದೆ ಅಂತ ವಾದಕ್ಕಿಳಿದರು . ಆಗ ಕಿರಿಯ ಶ್ರೀಗಳ ಪರ ಬಂದಿದ್ದ ಹಲವು ಭಕ್ತರು , ಹಿರಿಯ ಶ್ರೀಗಳಿಗೆ ಮತ್ತು ಅವರ ಪರ ಇದ್ದ ಕೆಲವು ಭಕ್ತರಿಗೆ ಕೋರ್ಟ್ ತೀರ್ಪು ಓದಲು ತಿಳಿಸಿದರು . ಕೋರ್ಟ್ ಆದೇಶ ದಂತೆ ಮಠದಲ್ಲಿ ಕಿರಿಯ ಶ್ರೀಗಳು ಯಾವುದೇ ಕಾರ್ಯಕ್ರಮ ಮಾಡದಂತೆ ಆದೇಶ ನೀಡಿಲ್ಲಾ . ಹಾಗಾಗಿ ವಾದವೂ ನಡೆಯಿತು . ಉತ್ತರಾಧಿಕಾರಿ ವಿಚಾರವಾಗಿ ಇನ್ನೂ ವಿಚಾರಣೆ ಹಂತದಲ್ಲಿ ಅನ್ನೋ ವಿಚಾರ ಪ್ರಸ್ತಾಪಿಸಿ ಎರಡೂ ಕಡೆಯಿಂದ ಈ ವೇಳೆ ಮಾತಿನ ಚಕಮಕಿ ನಡೆಯಿತು.
