ಪಾಪನಾಶಿ : ಶ್ರೀ ಕಲ್ಮೇಶ್ವರ ಮಹಾರಥೋತ್ಸವ ಸಂಭ್ರಮದಲ್ಲಿ ಜನರ ಜಾತ್ರೆ

ಗದಗ : ಸೂರ್ಯ ನಿತ್ಯದ ಕೆಲಸ ಮುಗಿಸಿ ಮರೆಯಾ‌ಗುವ ಹೊತ್ತಿನಲ್ಲಿ ಕಲ್ಮೇಶ್ವರ ಮಠದ ಅಂಗಣದಲ್ಲಿ ಜನರ ಜಾತ್ರೆ ನೆರೆದಿತ್ತು. ಗೋದೂಳಿಯ ಸಮಯದಲ್ಲಿ ಕೆಂಬಣ್ಣ ಕಾಣಿಸಿ ಸೂರ್ಯ ಪೂರ್ಣಮುಳುಗಿ ಕತ್ತಲೆಯಾಗುತ್ತಿದ್ದಂತೆಯೇ ಕಲ್ಮೇಶ್ವರ ಮಠದ ‘ ದಾಸೋಹ ಹಾಗೂ ಆಧ್ಯಾತ್ಮದ’ ಬೆಳಕು ಭಕ್ತರ ಮನದಲ್ಲಿ ಹರಿದಾಡಿತು.

ಈ ಸಂಭ್ರಮವನ್ನು ಭಕ್ತರು ಅತ್ಯಂತ ಭಕ್ತಿ, ಪ್ರೀತಿ ಹಾಗೂ ತನ್ಮಯತೆಯಿಂದ ಸ್ವೀಕರಿಸಿ ಭಾವಪರವಶರಾದರು. ಕೋವಿಡ್‌ ಕಾರಣದಿಂದ ಎರಡು ವರ್ಷಗಳ ಕಾಲ ಮಹಾರಥೋತ್ಸವ ನಡೆದಿರಲಿಲ್ಲ. ಇದರಿಂದ ಭಕ್ತರು ಬೇಸರಗೊಂಡಿದ್ದರು. ಗದಗ ಜಿಲ್ಲೆಯ ಗದಗ ತಾಲೂಕಿನಲ್ಲಿ ಕೀರ್ತಿ ಹಾಗೂ ಹೆಮ್ಮೆ ಸಂಕ್ರಮಣ ಹೆಚ್ಚಿಸಿರುವ ಈ ಜಾತ್ರೆ ಬರುವುದನ್ನೇ ಕಾಯುತ್ತಿದ್ದರು. ಭಾನುವಾರ ಸಂಜೆ ನಡೆದ ಮಹಾರಥೋತ್ಸವ ಹಿಂದಿನ ಎಲ್ಲಾ ಬೇಸರವನ್ನು ದೂರ ಮಾಡಿ ಸಾವಿರಾರು ಜನರಲ್ಲಿ ಮಹಾಸಂಭ್ರಮವನ್ನು ಉಂಟು ಮಾಡಿತು.

ಕಲ್ಮೇಶ್ವರ ಜಾತ್ರೆಯ’ ತೇರಿಗಾಗಿ ಸಾವಿರಾರು ಭಕ್ತ ಸಮೂಹ ಹಲವು ತಿಂಗಳುಗಳಿಂದ ಕಾಯುತ್ತಲೇ ಇತ್ತು. ಸಂಭ್ರಮಕ್ಕೆ, ಪ್ರೀತಿಯ ಅಪ್ಪುಗೆಗೆ, ಜಾತ್ರೆಯ ನೆಪದಲ್ಲಿ ಬದುಕಿನ ಹುಮ್ಮಸ್ಸು ಹೆಚ್ಚಿಸಿಕೊಳ್ಳುವ ವೇದಿಕೆಗೆ ಬಂಧು ಬಾಂಧವರು, ಸ್ನೇಹಿತರು ಹಾಗೂ ಸಹದ್ಯೋಗಿಗಳು ಈ ಅವಕಾಶಕ್ಕಾಗಿ ಕಾಯುತ್ತಿದ್ದರು. ಕಲ್ಮೇಶ್ವರ ಮಠದ ಎದುರಿನ ರಥಬೀದಿ ಮಠಕ್ಕೆ ಬರುವ ವಿಶಾಲವಾದ ಮಾರ್ಗದಲ್ಲಿ ಜನಸಾಗರವೇ ನೆರೆದಿತ್ತು.

ಬೆಳಿಗ್ಗೆಯಿಂದಲೇ ಜನ ಬೇರೆ ಬೇರೆ ಊರುಗಳಿಂದ ಬಂದು ವಿಶ್ರಾಂತಿ ಪಡೆದು ದಾಸೋಹ ಸೇವಿಸಿ ಮಹಾರಥೋತ್ಸವಕ್ಕೆ ಕಾಯುತ್ತಿದ್ದರು. ಸಂಜೆಯಾಗುತ್ತಿದ್ದಂತೆಯೇ ಆ ಸಂಭ್ರಮ ದುಪ್ಪಟ್ಟಾಯಿತು. ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ಲಭಿಸಿತು.

ತೇರು ಮಠದ ಮುಂಭಾಗದ ಆವರಣದಿಂದ ಸ್ವಲ್ಪ ಮುಂದೆ ಚಲಿಸುತ್ತಿದ್ದಂತೆ ಸಾವಿರಾರು ಭಕ್ತರು ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಉತ್ತುತ್ತಿ ಎಸೆದು ಭಕ್ತಿ ಅರ್ಪಿಸಿದರು. ತೇರು ಪಾದಗಟ್ಟೆ ತಲುಪಿ ವಾಪಸ್‌ ಸ್ವ ಸ್ಥಾನಕ್ಕೆ ಬರುತ್ತಿದ್ದಂತೆಯೇ ಭಕ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮಹಿಳೆಯರು, ಮಕ್ಕಳು, ವೃದ್ಧರು, ಹೆಚ್ಚಾಗಿ ಗ್ರಾಮೀಣ ಪ್ರದೇಶಗಳ ಜನ ಮಹಾ ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

ಇಂದು ಕಲ್ಮೇಶ್ವರ ಮಹಾ ರಥೋತ್ಸವದ ಅಂಗವಾಗಿ ಕಲ್ಮೇಶ್ವರ ನಾಟ್ಯ ಸಂಘದ ವತಿಯಿಂದ ಕಳಚಿ ಬದ್ದಿತ್ತು ಧರ್ಮದ ಕೋಟಿಎಂಬ ಸಾಮಾಜಿಕ ನಾಟಕ ಪ್ರದರ್ಶನ ರಾತ್ರಿ 10 ಗಂಟೆಗೆ ಪ್ರದರ್ಶನ ವಾಗಲಿದೆ.

Leave a Reply

Your email address will not be published. Required fields are marked *