ಅಕ್ರಮ ಆಸ್ತಿ ವರ್ಗಾವಣೆ : ಗದಗ – ಬೆಟಗೇರಿ ನಗರಸಭೆ ಪೌರಾಯುಕ್ತ ಸೇರಿ ಇಬ್ಬರು ಅಮಾನತು

ಕರ್ತವ್ಯಲೋಪ ಹಾಗೂ ಅಕ್ರಮ ಆಸ್ತಿ ವರ್ಗಾವಣೆ – ಪೌರಾಯುಕ್ತ ರಮೇಶ್​ ಸುಣಗಾರ ಅಮಾನತು – ಪೌರಾಡಳಿತ ನಿರ್ದೇಶನಾಲಯ ಆದೇಶ

ಗದಗ : ಕರ್ತವ್ಯಲೋಪ ಹಾಗೂ ಅನಧಿಕೃತ ನಿವೇಶನಗಳ ಆಸ್ತಿಯ ಹಕ್ಕನ್ನು ವರ್ಗಾವಣೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ರಮೇಶ್​ ಸುಣಗಾರ ಅವರನ್ನು ತಕ್ಷಣಕ್ಕೆ ಜಾರಿಯಾಗುವಂತೆ ಸೇವೆಯಿಂದ ಅಮಾನತು ಮಾಡಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ.

ರಮೇಶ್ ಸುಣಗಾರ ಈ ಹಿಂದೆ ದೊಡ್ಡಬಳ್ಳಾಪುರ ಪೌರಾಯುಕ್ತರಾಗಿದ್ದ ವೇಳೆ,ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 11 ರಲ್ಲಿ 39 ಅನಧಿಕೃತ ನಿವೇಶನಗಳ ಆಸ್ತಿ ಹಕ್ಕನ್ನು ವರ್ಗಾಯಿಸಿದ್ದರು ಎಂದು ಹೇಳಲಾಗಿದೆ.

ಪೌರಾಡಳಿತ ನಿರ್ದೇಶನಾಲಯ ಆದೇಶ ಪ್ರತಿ

ಈ ಬಗ್ಗೆ ಪೌರಾಡಳಿತ ಸಚಿವರಿಗೆ ದೂರು ಸಲ್ಲಿಸಲಾಗಿತ್ತು. ತನಿಖೆ ನಡೆಸಿದ ಬೆಂಗಳೂರು ಗ್ರಾಮಾಂತರ ನಗರಾಭಿವೃದ್ಧಿ ಕೋಶ ತಂಡ, ನಗರಯೋಜನೆ ಪ್ರಾಧಿಕಾರದ ಅನುಮತಿ ಪಡೆಯದೇ 39 ಆಸ್ತಿಯನ್ನು ಎನ್ ರಾಮರೆಡ್ಡಿ ಅಲಿಯಾಸ್ ನಾರಾಯಣ ರೆಡ್ಡಿ ಎನ್ನುವವರಿಗೆ ಆಸ್ತಿ ವರ್ಗ ಮಾಡಿಕೊಡಲು ರಮೇಶ್ ಸುಣಗಾರ ಸಹಾಯ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಇದಲ್ಲದೇ ನಂತರದಲ್ಲಿ ಎನ್ ರಾಮರೆಡ್ಡಿ ಅವರ ಪತ್ನಿ ಸುಜಾತಾ ರೆಡ್ಡಿ, ಮಗನಾದ ಶ್ರೀನಿವಾಸ ರೆಡ್ಡಿ ಅವರಿಗೂ ಆಸ್ತಿ ವರ್ಗಾವಣೆ ಮಾಡಿಕೊಡುವಲ್ಲಿ ಸಹಾಯ ಮಾಡಿರುವುದಾಗಿ ತಿಳಿಸಿತ್ತು.ಈ ವರದಿ ಆಧರಿಸಿ ಪೌರಾಯುಕ್ತರಾಗಿದ್ದ ರಮೇಶ ಸುಣಗಾರ ಹಾಗೂ ಕಂದಾಯಾಧಿಕಾರಿ ರವೀಂದ್ರ ಜಾಯಗೊಂಡ ಅವರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಪೌರಾಡಳಿತ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.ಆರೋಪ ಕೇಳಿ ಬಂದ ತಕ್ಷಣ ಈ ಬಗ್ಗೆ ವರದಿ ನೀಡುವಂತೆ ಕೇಳಿಕೊಳ್ಳಲಾಗಿತ್ತು. ವರದಿಯಲ್ಲಿ ಸರ್ಕಾರ ಮತ್ತು ನಿರ್ದೇಶನಾಲಯದ ಸುತ್ತೋಲೆಗಳ ವಿರುದ್ಧವಾಗಿ ಅನಧಿಕೃತ ನಿವೇಶನಗಳ ಆಸ್ತಿಯ ಹಕ್ಕನ್ನು ವರ್ಗಾಯಿಸಿರುವುದು ಕಂಡು ಬಂದಿದೆ. ಹೀಗೆ ಇ-ಆಸ್ತಿ ಮಾಡಿಕೊಡುವ ಮೂಲಕ ಆರೋಪಿಗಳು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಆದ್ದರಿಂದ ಸದರಿ ಅಧಿಕಾರಿಗಳನ್ನು ನಿರ್ದೇಶನಾಲಯದ ಜಾರಿ ಮಾಡಲಾದ ನಿಯಮ 12ರ ನೋಟಿಸ್​ ಅನ್ನು ಹಿಂಪಡೆದು ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯು ಪ್ರಕಟನೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *