ಗಜೇಂದ್ರಗಡ : ೧೨/೦೮/೨೦೨೫ ಗಜೇಂದ್ರಗಡ ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಸರ್ಕಾರಿ ಶಾಲೆಗಳ ಕಟ್ಟಡಗಳಿಗೆ ಹಾನಿಗೊಳಗಾಗಿವೆ. ಹಾನಿಗೊಳಗಾದ ಶಾಲೆಗಳ ಕೊಠಡಿಗಳ ಪರಿಶೀಲನೆಯನ್ನು ಮಂಗಳವಾರ ಬೆಳಂಬೆಳಿಗ್ಗೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ, ಕಂದಕೂರ ಅವರು ಭೇಟಿ ನೀಡಿ ಪರಿಶೀಲಿಸಿ ದುರಸ್ತಿಗೊಳಿಸುವ ಭರವಸೆಯನ್ನು ನೀಡಿದರು.
ತಾಲೂಕಿನ ಪುರ್ತಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಇಒ ಅವರು, ಮಳೆಯಿಂದ ಶಾಲಾ ಕಟ್ಟಡಗಳು ಜಂಪಲು ಹಿಡಿದಿರುವುದನ್ನು ಪರಿಶೀಲಿಸಿದರು. ಶಾಲೆಯ ಎಲ್ಲ ಕೊಠಡಿಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಕಟ್ಟಡದ ಮೇಲ್ಛಾವಣಿ ಮತ್ತು ಒಳಾಂಗಣದ ಗೋಡೆಗಳನ್ನು ಪರಿಶೀಲಿಸಿದರು. ಹಾನಿಗೊಳಗಾದ ಕಟ್ಟಡದ ಗೋಡೆಗಳನ್ನು ತಾಲೂಕು ಪಂಚಾಯತ ಅನುದಾನದಡಿ ಮುಂದಿನ ದಿನಗಳಲ್ಲಿ ದುರಸ್ತಿಗೊಳಿಸುವುದಾಗಿ ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ ಇಒ ಕಂದಕೂರ ಅವರು ಭರವಸೆ ನೀಡಿದರು.
ಮಳೆಯಿಂದಾಗಿ ಶಾಲಾ ಕಟ್ಟಡದ ಒಳಗೆ ನೀರು ಬರುತ್ತಿದ್ದು ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಇದರಿಂದ ಶಾಲಾ ಸಮಯದಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಕಟ್ಟಡ ದುರಸ್ತಿಗೊಳಿಸುವಂತೆ ಶಾಲಾ ಆಡಳಿತ ಮಂಡಳಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಇಒ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜೂರು ಗ್ರಾಪಂ ವ್ಯಾಪ್ತಿಯ ಪುರ್ತಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಇಒ ಅವರು ತಿಳಿಸಿದ್ದಾರೆ. ಇದೇ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ಬಾಲಾಜಿ ಬೋಸ್ಲೆ ಅವರು ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಇಒ ಅವರಿಗೆ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ಇಒ ಕಂದಕೂರ, ಮುಂದಿನ ಕ್ರಿಯಾಯೋಜನೆಯಲ್ಲಿ ಕಾಂಪೌಂಡ್ ಗೆ ಬೇಕಾದ ಅನುದಾನ ಮೀಸಲಿಟ್ಟು ಕಾಮಗಾರಿ ಮಾಡಿಕೊಡುವುದಾಗಿ ತಿಳಿಸಿದರು.
ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಬಸವರಾಜ ಬಡಿಗೇರ, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಪುರ್ತಗೇರಿ ಗ್ರಾಮದ ಸಾರ್ವಜನಿಕರು ಸ್ಥಳದಲ್ಲಿದ್ದರು.