ಬೆಂಗಳೂರು : ನಿನ್ನೆಯಷ್ಟೇ ಸ್ಥಳೀಯ ಚುನಾವಣೆಗೆ ತಯಾರುವಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಭೆ ಮೂಲಕ ಕರೆ ನೀಡಿದ್ದರು.
ಇದೀಗ ಸಿಎಂ ಸಿದ್ದರಾಮಯ್ಯ ಅವರು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.
ತಾಪಂ, ಜಿಪಂ ಚುನಾವಣೆಗೆ ಕುರಿತಂತೆ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಸರ್ಕಾರ ಚುನಾವಣೆಗೆ ಸಿದ್ಧವಾಗಿದೆ. ಮೇ ಅಂತ್ಯಕ್ಕೆ ತಾಪಂ, ಜಿಪಂ ಚುನಾವಣೆ ನಡೆಸುತ್ತೇವೆ. ಮೀಸಲಾತಿ ಅಧಿಸೂಚನೆ ಮೇ.30ರೊಳಗೆ ಪ್ರಕಟಿಸುತ್ತೇವೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರದ ಎಜಿ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಚುನಾವಣೆಯ ದಿನಾಂಕ ಯಾವಾಗ ಬೇಕಾದರೂ ಆಗಲಿ. ನಾವು ಚುನಾವಣೆಗೆ ಸಿದ್ದರಾಗಿರುವುದಾಗಿ ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ಕಳೆದ ಮೂರುವರೆ ವರ್ಷಗಳಿಂದ ನೆನೆಗುದಿಗೆ ಬಿದ್ದ ಜಿಪಂ, ತಾಪಂ ಚುನಾವಣೆಗಳನ್ನು ನಡೆಸುವ ಸಂಬಂಧ ಇಂದು ಹೈಕೋರ್ಟ್ನಲ್ಲಿ ಮಹತ್ವದ ವಿಚಾರಣೆ ಮುಕ್ತಾಯವಾಗಿದ್ದು, ಅದರಂತೆ ಮೇ.30ರೊಳಗೆ ಅಂತಿಮ ಮೀಸಲಾತಿ ಪಟ್ಟಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಬಳಿಕ ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ ನಿಗದಿಪಡಿಸಬಹುದು ಎಂದು ಸರ್ಕಾರ ನ್ಯಾಯಾಲಯದ ಗಮನಕ್ಕೆ ತಂದಿತು. ಮೇ ಅಂತ್ಯಕ್ಕೆ ತಾಪಂ, ಜಿಪಂ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.