15.2 C
New York
Monday, November 10, 2025

Buy now

spot_img

ಗದಗ : ಮಲ್ಲಕಂಬ ಶ್ರೇಷ್ಠ ಕ್ರೀಡೆ: ಸಚಿವ ಎಚ್‌.ಕೆ.ಪಾಟೀಲ ಅಭಿಮತ

ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡಾಕೂಟಕ್ಕೆ ಚಾಲನೆ

ಗದಗ : ‘ಮಲ್ಲಕಂಬ ಶ್ರೇಷ್ಠ ಕ್ರೀಡೆ. ಇದು ಭಾರತದ ಪ್ರಾಚೀನ ಕ್ರೀಡೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ವಿಶೇಷ ಮಹತ್ವ ಪಡೆದುಕೊಳ್ಳುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಸಿಬ್ಬಂದಿ ಇಲ್ಲಿಗೆ ಬಂದಿರುವ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡುವ ಮೂಲಕ ಕ್ರೀಡಾಕೂಟದ ಯಶಸ್ಸಿಗೆ ನೆರವಾಗಬೇಕು’ ಎಂದರು.

ವಿಧಾನ ಪರಿಷತ್‌ ಶಾಸಕ ಎಸ್‌.ವಿ.ಸಂಕನೂರ ಮಾತನಾಡಿ, ‘ಗದಗ ಜಿಲ್ಲೆ ಕ್ರೀಡೆ, ಸಂಗೀತ ಹಾಗೂ ಸಹಕಾರ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಇಲ್ಲಿನ ಕ್ರೀಡಾಪಟುಗಳು ಹಾಕಿ, ಸೈಕ್ಲಿಂಗ್‌ ಹಾಗೂ ಕುಸ್ತಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ತರುವ ಮೂಲಕ ಜಿಲ್ಲೆಯ ಕೀರ್ತಿಯನ್ನು ದೇಶದುದ್ದಗಲಕ್ಕೂ ಪಸರಿಸಿದ್ದಾರೆ’ ಎಂದರು.

‘ಮಲ್ಲಕಂಬ ನಮ್ಮ ದೇಶದ ಪ್ರಾಚೀನ ಕ್ರೀಡೆ. ಆದರೆ, ಇಲ್ಲೀವರೆಗೆ ಈ ಕ್ರೀಡೆ ಏಷ್ಯನ್‌ ಗೇಮ್ಸ್‌ ಅಥವಾ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಿಲ್ಲ. ಇದಕ್ಕೆ ಸರ್ಕಾರ, ರಾಜಕಾರಣಿಗಳು ಅಥವಾ ಅಧಿಕಾರಿಗಳು ಯಾರು ಕಾರಣ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

‘ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದನಂತರ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಖೇಲೋ ಇಂಡಿಯಾ ಸ್ಥಾಪಿಸಿ, ಅದಕ್ಕೆ ಮಲ್ಲಕಂಬವನ್ನೂ ಜೋಡಿಸಲಾಗಿದೆ. ಆದರೂ, ನಮ್ಮ ದೇಶದಲ್ಲಿ ಕ್ರಿಕೆಟ್‌, ಫುಟ್‌ಬಾಲ್‌ಗಿಂತ ಬೇರೆ ಯಾವುದೇ ಕ್ರೀಡೆ ಮುನ್ನಲೆಗೆ ಬರದಿರುವುದು ಬೇಸರದ ವಿಷಯ’ ಎಂದರು.

‘ರಾಜ್ಯದಲ್ಲಿ 35 ಶೈಕ್ಷಣಿಕ ಜಿಲ್ಲೆಗಳಿದ್ದು, ಮಲ್ಲಕಂಬ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 20 ಜಿಲ್ಲೆಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಿದ್ದಾರೆ. ಅಂದರೆ, ಈ ಕ್ರೀಡೆ ಎಲ್ಲೆಡೆ ಪ್ರಚಲಿತವಿಲ್ಲ. ಹಾಗಾಗಿ, ಇದನ್ನು ಜನಪ್ರಿಯಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದರು.

ಸರ್ಕಾರ ಎಲ್ಲ ಹಂತದ ಶಾಲಾ ಕಾಲೇಜುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಲು ಕ್ರಮವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿ, ‘ಮಲ್ಲಕಂಬ ಒಂದು ರೋಮಾಂಚನಕಾರಿ ಕ್ರೀಡೆ. ದೈಹಿಕ ಮತ್ತು ಮಾನಸಿಕ ಸಮತೋಲನದಿಂದ ಕೂಡಿರುವ ಈ ಕ್ರೀಡೆಯನ್ನು ಅಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಆತ್ಮಸ್ಥರ್ಯ ಮೂಡುತ್ತದೆ’ ಎಂದರು.

‘ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಬೆಳೆಸುವ ಮಲ್ಲಕಂಬದಂತಹ ಕ್ರೀಡೆ ಇನ್ನೂ ಜನಪ್ರಿಯಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಮಲ್ಲಕಂಬ ಪಠ್ಯದ ಒಂದು ಭಾಗವಾಗಬೇಕಿದೆ’ ಎಂದರು.

‘ರಾಜ್ಯ ಮಟ್ಟದ ಮಲ್ಲಕಂಬ ಸ್ಪರ್ಧೆಯಲ್ಲಿ 20 ಜಿಲ್ಲೆಗಳ 310 ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಸೋಲು ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಕ್ರೀಡಾಮನೋಭಾವದಿಂದ ಭಾಗವಹಿಸುವುದು ಮುಖ್ಯ’ ಎಂದರು.

ಡಿಡಿಪಿಐ ಆರ್‌.ಎಸ್‌.ಬುರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎ.ಯರಗುಡಿ ನಿರೂಪಿಸಿದರು. ಬಿಇಒ ವಿ.ವಿ.ನಡುವಿನಮನಿ ವಂದಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳ್ಳಾರಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಫ್‌.ಪೂಜಾರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಲಮಾಣಿ, ಕೊಡ್ಲಿ, ಪ್ರಕಾಶ ಮ್ಯಾಗೇರಿ, ಸಿ.ಕೆ.ಚೆನ್ನಾಳ, ಶರಣು ಗೊಗೇರಿ, ಎಸ್ ಎನ್ ಬಳ್ಳಾರಿ, ಎಂ ಕೆ ಲಮಾಣಿ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news