ಸಚಿವ ಎಚ್.ಕೆ.ಪಾಟೀಲ ಅವರಿಂದ ನುಲಿಯ ಚಂದಯ್ಯ ಜಯಂತಿ ಉದ್ಘಾಟನೆ
ಗದಗ ಅಗಸ್ಟ 9: ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ಶರಣ ಶ್ರೀ ನುಲಿಯ ಚಂದಯ್ಯನವರೂ ಒಬ್ಬರು. ಕಾಯಕವೇ ಲಿಂಗ ಪೂಜೆ ಎಂದು ಸಾರಿದ ಇವರು ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಶ್ರದ್ದೆಯಿಂದ ಮಾಡಬೇಕು ಎಂದು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ ಎಂದು ರಾಜ್ಯದ ಕಾನೂನು, ನ್ಯಾಯ , ಮಾನವ ಹಕ್ಕುಗಳು , ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಶನಿವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ನುಲಿಯ ಚಂದಯ್ಯನವರು ತಮ್ಮ ಅರ್ಥಪೂರ್ಣ ವಚನಗಳ ಮೂಲಕ ಸಮಾಜದ ಅಂಕುಡೊAಕುಗಳನ್ನು ತಿದ್ದುವಲ್ಲಿ ಶ್ರಮಿಸಿದ್ದಾರೆ. ಇವರ ಕಾಯಕವು ಅರಣ್ಯಕ್ಕೆ ಹೋಗಿ ಹುಲ್ಲು ತಂದು ಹಗ್ಗ ಮಾಡಿ ಮಾರುವುದು. ಹಗ್ಗ ಮಾರಿ ಬಂದ ಹಣದಿಂದ ಅವರು ದಾಸೋಹ ಕೈಗೊಳ್ಳುತ್ತಿದ್ದರು. ಕಾಯಕ ನಿಷ್ಟೆ, ಜಂಗಮ ದಾಸೋಹ ಇವರ ವಚನಗಳಲ್ಲಿ ಗಮನಾರ್ಹವಾದವುಗಳಾಗಿವೆ. ನುಲಿಯ ಚಂದಯ್ಯನವರು ಅನುಭವ ಮಂಟಪದಲ್ಲಿ ಶ್ರೇಷ್ಟ ಶರಣರಾಗಿದ್ದರು. ಕಾಯಕ ಸೇವೆಗಿಂತ ಇನ್ನೊಂದು ಸೇವೆ ಇಲ್ಲ ಎಂದು ಸಾರಿದ ನುಲಿಯ ಚಂದಯ್ಯನವರ ವಚನಗಳ ಸಂದೇಶದ ಕುರಿತು ಹೊಸ ಪೀಳಿಗೆಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ನುಲಿಯ ಚಂದಯ್ಯ ಸಮುದಾಯದವರು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದವರಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಉನ್ನತ ಮಟ್ಟದ ಕ್ರೀಡಾಸೌಲಭ್ಯಗಳು ಸುಲಭವಾಗಿ ಲಭ್ಯವಾಗುವಂತೆ ಈಗಾಗಲೇ ಅಗತ್ಯಕ್ಕನುಗುಣವಾಗಿ ಕ್ರೀಡಾಂಗಣ, ಈಜುಗೊಳಗಳನ್ನು ತೆರೆಯಲಾಗಿದೆ. ಇವುಗಳ ಸದ್ಭಳಕೆ ಮಾಡಿಕೊಂಡು ಕ್ರಿಡಾ ಸಾಧನೆ ಇನ್ನಷ್ಟು ಮಾಡಬೇಕೆಂದು ಹೇಳಿದರು. ಜೊತೆಗೆ ಸಮಾಜದ ಮಕ್ಕಳು ಶಿಕ್ಷಣವಂತರಾಗಿ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆ ಬಳಸಿಕೊಂಡು ಶ್ರೇಷ್ಟ ವ್ಯಕ್ತಿಗಳಾಗಬೇಕು ಎಂದು ಸಚಿವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ , ಸಮಾಜದ ಪ್ರಮುಖರಾದ ಮೋಹನ ಕಟ್ಟಿಮನಿ, ಎಸ್.ಎನ್.ಬಳ್ಳಾರಿ, ವಾಜಿ ಗಡಾದ, ಪರಶುರಾಮ ಕಟ್ಟಿಮನಿ, ಮೇದಾಪೂರ, ಸುರೇಶ ಕಟ್ಟಿಮನಿ, ಮೋಹನ ಭಜಂತ್ರಿ, ಲಕ್ಷö್ಮವ್ವ ಭಜಂತ್ರಿ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮುದಾಯದವರು ಹಾಜರಿದ್ದರು.
ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ಅವರು ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ ವಂದಿಸಿದರು. ನಗರದ ವಿ.ಡಿ.ಎಸ್. ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಂ.ಸಿ. ಕಟ್ಟಿಮನಿ ಅವರು ಉಪನ್ಯಾಸ ನೀಡಿದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ಅತೀ ಹೆಚ್ಚು ಅಂಕಗಳ ಗಳಿಸಿದ ನುಲಿಯ ಚಂದಯ್ಯ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ವಿವರ :* ಕು.ಭೂಮಿಕಾ ಪ್ರಶಾಂತ ಬಾಗಲಕೋಟಿ- 2024 ರ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 93.80 % ; ಕು. ಸ್ಪೂರ್ತಿ ತಿಪ್ಪಣ್ಣ ಸೀತಾರಹಳ್ಳಿ- 2025 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 92.80 % ; ಕು. ಯಶಸ್ವಿನಿ ಮಾರುತಿ ಕಟ್ಟಿಮನಿ- 2025 ರ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 86 % ; ಕು. ಚಂದ್ರಶೇಖರ ಹನಮಂತಪ್ಪ ಭಜಂತ್ರಿ- 2025 ರ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 82.30 % ; ಕು. ಪೂಜಾ ಪ್ರಶಾಂತ ಬಾಗಲಕೋಟಿ- 2024 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 71.20 % ; ಕು. ಪ್ರಸನ್ನ ರಮೇಶ ಗಡಾದ – 2025 ರ ಬಿ.ವಿ.ಎ. ಪರೀಕ್ಷೆಯಲ್ಲಿ ಗರಿಷ್ಟ ಅಂಕ ಹಾಗೂ ಕು. ಪ್ರತಿಭಾ ಕಟ್ಟಿಮನಿ 2025 ರ ವೈದ್ಯಕೀಯ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಪಡೆದಿರುತ್ತಾರೆ.
ನುಲಿಯ ಚಂದಯ್ಯ ಸಮಾಜದ ಮುಖಂಡರಿಗೆ ಸನ್ಮಾನಿಸಿದ ವಿವರ :* ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿವಾನಂದ ಫಕೀರಪ್ಪ ಭಜಂತ್ರಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ಎಚ್.ಬಿ.ವೀರಾಪೂರ, ಪರಶುರಾಮ ಎಫ್. ಕಟ್ಟಿಮನಿ, ಮೋಹನ್ ಎಚ್. ಕಟ್ಟಿಮನಿ, ಮೋಹನ ಭಜಂತ್ರಿ, ಹುಲ್ಲಪ್ಪ ಭಜಂತ್ರಿ, ವಿಜಯ ಮುಳಗುಂದ, ಡಾ.ಕೆ. ಲೋಕೇಶ ಅವರನ್ನು ಸನ್ಮಾನಿಸಲಾಯಿತು.
ಮೆರವಣಿಗೆ : ಶರಣ ನುಲಿಯ ಚಂದಯ್ಯ ದಿನಾಚರಣೆ ಅಂಗವಾಗಿ ಗದಗ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ನುಲಿಯ ಚಂದಯ್ಯ ಭಾವಚಿತ್ರ ಮೆರವಣಿಗೆ ವಿವಿಧ ಕಲಾ ಪ್ರಕಾರಗಳೊಂದಿಗೆ ಅದ್ದೂರಿಯಾಗಿ ಆರಂಭಗೊAಡು ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿತು. ಮೆರವಣಿಗೆಗೆ ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ವೇಳೆ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.