ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪರಿಂದ ಪ್ರಗತಿ ಪರಿಶೀಲನೆ
ಗದಗ ಜುಲೈ 7: ಶಿಕ್ಷಣ ಇಲಾಖೆಯಲ್ಲಿ ಕಳೆದ ಬಾರಿಗಿಂತ ಹಾಜರಾತಿ ಕಡಿಮೆ ಇದ್ದ ಶಾಲೆಗಳ ಬಗ್ಗೆ ಗಮನ ವಹಿಸಿ ಮಕ್ಕಳನ್ನು ಶಾಲೆಗೆ ಕರೆತರತಂದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಎಸ್.ಮಧು ಬಂಗಾರಪ್ಪ ಅವರು ಸೂಚಿಸಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಶೇ. 97 ಪ್ರತಿಶತ ಮಕ್ಕಳ ಹಾಜರಾತಿ ಕಡ್ಡಾಯ ಇರುವಂತೆ ಶಿಕ್ಷಕರು ಮುತುವರ್ಜಿ ವಹಿಸಬೇಕು. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಕಡಿಮೆ ಆಗಿರಬಹುದು. ಆದರೆ ಮಕ್ಕಳಿಗೆ ನಕಲು ಮಾಡಲು ಬಿಟ್ಟುಕೊಟ್ಟಿಲ್ಲ. ಶಿಕ್ಷಕರ ಮೂಲಕ ಮಕ್ಕಳಿಗೆ ಮೇಲಿಂದ ಮೇಲೆ ಪರೀಕ್ಷೆಗಳನ್ನು ನಡೆಸಿ, ಮಕ್ಕಳು ಸ್ವಂತ ಬಲದಿಂದ ಬರೆಯುವಂತೆ ನೋಡಿಕೊಳ್ಳಲಾಯಿತು. ಹಾಗಾಗಿ ಫಲಿತಾಂಶ ಕಡಿಮೆ ಬಂದರೂ ಉತ್ತಮ್ಮ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.
ಎಲ್ಲ ಶಾಲೆಗಳಲ್ಲಿಯೂ ಮಕ್ಕಳು ಸಂವಿಧಾನ ಪೀಠಿಕೆಯನ್ನು ಓದುವಂತೆ ನೋಡಿಕೊಳ್ಳಬೇಕು. ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ,ಸಮವಸ್ತç ವಿತರಣೆಯಾಗಿರುವ ಕುರಿತು ನಿಗಾ ವಹಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶಾಲಾ ಕೊಠಡಿಗಳ ದುರಸ್ತಿ, ಹೊಸ ಕಟ್ಟಡಗಳಿಗೆ ಅನುದಾನ ಸಿಗಬೇಕು ಎಂದು ಶಾಸಕರು ಆಗ್ರಹಿಸುತ್ತಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಳೆದ ಬಾರಿಗಿಂತ ಅಧಿಕ ಅನುದಾನವನ್ನು ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಎಲ್ಲರ ನಿರೀಕ್ಷೆಗಿಂತಲೂ ಅಧಿಕ ಅನುದಾನ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.
ವಸತಿ ಶಾಲೆ, ವಸತಿ ಮತ್ತು ಶೈಕ್ಷಣಿಕ ಕೊಠಡಿ ಒಂದೇ ಆಗಿದ್ದು, ಮೂಲ ಭೂತ ಸೌಕರ್ಯ ಇಲ್ಲದಿರುವ ಶಾಲೆಗಳ ಬಗ್ಗೆ ನನ್ನ ಗಮನಕ್ಕೆ ತರಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಗೊಜನೂರು ಕಸ್ತೂರಿ ಬಾ ವಸತಿ ಶಾಲೆ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ಜರುಗಿತು. ಈ ಬಗ್ಗೆ ಬೆಂಗಳೂರಿನಲ್ಲಿ ಗುರುವಾರ ಸಭೆ ನಡೆಸಿ ಅಗತ್ಯ ಸೌಲಭ್ಯ ಒದಗಿಸಿ ಕೊಡಲಾಗುವುದು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬನ್ನಿ ಎಂದು ಡಿಡಿಪಿಐ ಅವರಿಗೆ ಶಿಕ್ಷಣ ಸಚಿವ ಬಂಗಾರಪ್ಪ ಸೂಚಿಸಿದರು
ರಾಜ್ಯದಲ್ಲಿ ಸರ್ಕಾರದಿಂದ ಎಲ್ ಕೆ ಜಿ, ಯುಕೆಜಿ ಆರಂಭಿಸಲಾಗಿದೆ. ಕಳೆದ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಆರಂಭಿಸಲಾಗಿತ್ತು. ಈ ಬಾರಿ ರಾಜ್ಯದ ಉಳಿದ ಭಾಗಗಳಲ್ಲಿ 4000 ಶಾಲೆಗಳಲ್ಲಿ ಎಲ್ ಕೆ ಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 65 ಎಲ್ ಕೆ ಜಿ, ಯುಕೆಜಿ ಅನುಮೋದನೆ ನೀಡಲಾಗಿತ್ತು. ಇನ್ನೂ ಹೆಚ್ಚಿನ ಎಲ್ ಕೆ ಜಿ, ಯುಕೆಜಿಗೆ ಅನುಮೋದನೆ ನೀಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಮಾತನಾಡಿ ಗದಗ ನಗರದಲ್ಲಿ ಕಳೆದ ಬಾರಿಯ ದಾಖಲಾತಿಗಿಂತ 700 ಕ್ಕೂ ಅಧಿಕ ಮಕ್ಕಳ ಪ್ರವೇಶ ಆಗುವುದು ಬಾಕಿ ಇದೆ. ಶಿರಹಟ್ಟಿ ತಾಲೂಕಿನಲ್ಲೂ ಕಳೆದ ಬಾರಿಗಿಂತ 1300 ಕ್ಕೂ ಹೆಚ್ಚು 1ನೇ ತರಗತಿಗೆ ಪ್ರವೇಶ ಬಾಕಿ ಇದೆ. ಅದೇ ರೀತಿ ರೋಣ, ಮುಂಡರಗಿಯಲ್ಲಿ ಇದೇ ಪರಿಸ್ಥಿತಿ ಇದೆ. ಜುಲೈ ತಿಂಗಳೊಳಗಾಗಿ ಪ್ರವೇಶ ಪ್ರಕ್ರಿಯೆ ಅಧಿಕಗೊಳ್ಳಬೇಕು ಎಂದು ಸಚಿವ ಎಚ್.ಕೆ. ಪಾಟೀಲ ನಿರ್ದೇಶನ ನೀಡಿದರು.
ಶಾಲಾ ಶೌಚಾಲಯ ದುರಸ್ತಿ ಬಗ್ಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ಶಾಲಾ ಶೌಚಾಲಯಗಳ ಕಡಿಮೆ ದುರಸ್ತಿಗೆ 5 ಕೋಟಿಗೂ ಅಧಿಕ ಹಣ ಬೇಕು. ಪೂರ್ಣ ದುರಸ್ತಿಗೆ 26 ಕೋಟಿ ಅಗತ್ಯವಿದೆ. ಹಾಗಾಗಿ, ದುರಸ್ತಿಗೆ ಶೇ. 50 ರಷ್ಟು ಅನುದಾನ ನೀಡಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕೋರಿದರು.
ಜಿಲ್ಲೆಯಲ್ಲಿ ಓದಿನ ಮನೆ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಿದೆ ಅದೇ ರೀತಿ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಪಿಂಕ್ ಟಾಯ್ಲೆಟ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಎರಡೂ ಯೋಜನೆಗಳು ಉತ್ತಮವಾಗಿದ್ದು ಅವುಗಳನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂದರು.
ಪ್ರತಿ ವರ್ಷ ಶಾಲಾ ಆರಂಭಕ್ಕೂ ಮೊದಲು ಲೋಕೋಯೋಗಿ ಇಲಾಖೆ ಇಂಜನೀಯರ್ ಗಳು ಶಾಲಾ ಕಟ್ಟಡಗಳ ಪರಿಶೀಲಿಸಿ ಬಳಕೆಗೆ ಯೋಗ್ಯವಾಗಿರುವ ಕುರಿತು ವರದಿ ನೀಡಬೇಕು. ಈ ವರ್ಷ ಈಗಾಗಲೇ ಶಾಲೆಗಳು ಆರಂಭವಾಗಿದ್ದು ಜಿಲ್ಲೆಯಲ್ಲಿ ಅಗಸ್ಟ 15 ರೊಳಗಾಗಿ ಶಾಲಾ ಕೊಠಡಿಗಳು ಬಳಕೆಗೆ ಯೋಗ್ಯವಾಗಿರುವ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದರು.
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರು ಮಾತನಾಡಿ ಆದ್ರಳ್ಳಿಯಲ್ಲಿರುವ ಶಾಲೆಯಲ್ಲಿ 650 ಕ್ಕೂ ಹೆಚ್ಚು ಅಧಿಕ ಮಕ್ಕಳು ದಾಖಲಾತಿಯಿದೆ. ಆದಕಾರಣ ಆ ಶಾಲೆಯನ್ನು ಕೆಪಿಎಸ್ (ಕರ್ನಾಟಕ ಪಬ್ಲಿಕ ಶಾಲೆಯನ್ನಾಗಿ ) ಮಾಡಬೇಕು ಎಂದು ಸಚಿವರ ಗಮನಕ್ಕೆ ತಂದರು.
ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ ಜಿಲ್ಲೆಯಲ್ಲಿಯ ಹಳೆ ಶಾಲಾ ಕಟ್ಟಡಗಳಿಗೆ ಕಾಯಕಲ್ಪ ಆಗಬೇಕಿದೆ. ಜಿಲ್ಲೆ ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಇರುವುದು ಖೇದಕರ ಸಂಗತಿಯಾಗಿದೆ. ಫಲಿತಾಂಶ ಸುಧಾರಣೆಗೆ ಒತ್ತುನೀಡಬೇಕಿದೆ. ಮುಂಡರಗಿ ತಾಲೂಕಾ ಕೇಂದ್ರದಲ್ಲಿ ಸರ್ಕಾರಿಪ್ರೌಢಶಾಲೆ ಈವರೆಗೂ ಸ್ಥಾಪನೆಯಾಗಿಲ್ಲ. ಶಿಕ್ಷಣ ಸಚಿವರು ಈ ಕುರಿತು ಗಮನ ಹರಿಸಬೇಕು. ದ್ವಿಭಾಷಾ ನೀತಿ ಸ್ವಾಗತಾರ್ಹವಾಗಿದೆ. ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದೊಂದು ಸರ್ಕಾರದ ಉತ್ತಮ ನಿರ್ಧಾರವಾಗಿದೆ ಎಂದರು.
ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಮಾತನಾಡಿ ಕಳೆದ ವಾರ ದೀಯುದಮನ್ ದ್ವೀಪಕ್ಕೆ ತೆರಳಿದಾಗ ಒಂದೇ ಸರ್ಕಾರಿ ಶಾಲೆಯಲ್ಲಿ 12000 ಕ್ಕೂ ಅಧಿಕ ವಿದ್ಯಾರ್ಥಿಗಳಿರುವುದು ಗಮನಿಸಲಾಗಿದೆ. ಅಲ್ಲಿರುವ ಮೂಲಭೂತ ಸೌಕರ್ಯ, ವ್ಯವಸ್ಥೆ ಉತ್ತಮವಾಗಿತ್ತು. ಅದರಂತೆ ರಾಜ್ಯದಲ್ಲಿ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಹೆಚ್ಚಿನ ಒತ್ತು ನೀಡುವಂತಾಗಲಿ ಎಂದರು.
ಸತತ ಮೂರು ವರ್ಷಗಳಿಂದ ಫಲಿತಾಂಶ ಕಡಿಮೆ ಇರುವ ಶಾಲೆಗಳಿಗೆ ನೀಡುವ ಅನುದಾನ ಕಡಿತಗೊಳಿಸುವ ಕುರಿತು ಹೊರಡಿಸಲಾದ ಸರ್ಕಾರದ ಆದೇಶ ಹಿಂಪಡೆಯಬೇಕು ಎಂದು ಸಚಿವರಲ್ಲಿ ಕೋರಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿಯವರು ಮಾತನಾಡಿ 2025-26 ನೇ ಸಾಲಿಗೆ ಜಿಲ್ಲೆಯಲ್ಲಿ ಒಟ್ಟು 1,120 ಶಾಲೆಗಳಿವೆ. ಆ ಪೈಕಿ 698 ಶಿಕ್ಷಣ ಇಲಾಖೆಯ, 22 ಸಮಾಜ ಕಲ್ಯಾಣ ಇಲಾಖೆ, 2 ಸ್ಥಳೀಯ ಸಂಸ್ಥೆ , 148 ಅನುದಾನಿತ, 242 ಅನುದಾನ ರಹಿತ , 7 ಇತರೆ ಸರಕಾರಿ , 1 ಕೇಂದ್ರ ಸರಕಾರದ ಶಾಲೆ ಹೀಗೆ ಒಟ್ಟು 1,120 ಶಾಲೆಗಳಿವೆ ಎಂದು ಸಭೆಗೆ ಮಾಹಿತಿ ನೀಡಿದರು. 5-7-2025 ಕ್ಕೆ ಇದ್ದಂತೆ ಒಟ್ಟು 167255 ಮಕ್ಕಳು ದಾಖಲಾಗಿವೆ. ಜಿಲ್ಲೆಯಲ್ಲಿರುವ ಕೆಪಿಎಸ್ ಶಾಲೆಗಳಲ್ಲಿ 2681 ಮಕ್ಕಳ ದಾಖಲಾತಿ ಇದೆ ಸಭೆಗೆ ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾದಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿ.ಪಂ. ಸಿ.ಇ.ಓ ಭರತ್ ಎಸ್, ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.