ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ
ಗದಗ ಜುಲೈ 2 : ಯುವಜನಾಂಗ ವಚನ ಸಾಹಿತ್ಯದ ತತ್ವಗಳನ್ನು ಅರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ,ದಾಸೋಹ ಸಿದ್ಧಾಂತಗಳಡಿ ನವ ಸಮಾಜ ನಿರ್ಮಾಣವಾಗಬೇಕು ಎಂದು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು ಹೇಳಿದರು.
ನಗರದ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ನಿಮಿತ್ಯ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅವರ ವಚನ ಸಾಹಿತ್ಯದ ಮೇಲಿನ ಕಾಳಜಿ ಇಡೀ ರಾಜ್ಯಾದ್ಯಂತ ಅಲೆದಾಡಿ 12 ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಅವರ ಪಾತ್ರ ಮಹತ್ತರವಾಗಿದೆ.ಅವರು ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವು ಜನ ಸಾಮಾನ್ಯರ ಜೀವನ ಕಟ್ಟುವಲ್ಲಿ ಮಹತ್ತರ ಪಾತ್ರವನ್ನು ವಹಿಸದೆ ಇಂತಹ ವಚನಗಳನ್ನು ಶ್ರಮವಹಿಸಿ ಸಂಗ್ರಹಿಸಿದ ಫ.ಗು.ಹಳಕಟ್ಟಿಯವರ ಕಾರ್ಯ ಶ್ಲಾಘನೀಯವಾದದ್ದು. ಅರ್ಥಪೂರ್ಣ,ಅತ್ಯಮೂಲ್ಯ ವಚನಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕಬರಸಾ ಬಬರ್ಜಿ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ಎಡೆಯೂರು ಶ್ರೀ ಜಗದ್ಗುರು ತೊಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಂಶೋಧಕ ಮತ್ತು ಸಾಹಿತ್ಯ ಪ್ರಚಾರಕರಾದ ಡಾ.ಫ.ಗು ಹಳಕಟ್ಟಿಯವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಅವರ ವಚನ ಸಾಹಿತ್ಯದ ಮೇಲಿನ ಕಾಳಜಿ ಇಡೀ ರಾಜ್ಯಾದ್ಯಂತ ಅಲೆದಾಡಿ 12 ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು. ಬ್ರಿಟಿಷ್ ರ ಕಾಲದಲ್ಲಿ ಕನ್ನಡದ ಅತ್ಯಮೂಲ್ಯ ವಚನ ಸಾಹಿತ್ಯವನ್ನು ಪ್ರಕಟಿಸುವುದು ಸುಲಭ ಕಾರ್ಯವಾಗಿದ್ದಿಲ್ಲ. ಅವರಿಗೆ ಎದುರಾದ ಅಡೆ ತಡೆಗಳನ್ನು ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ತಮ್ಮ ಸ್ವಂತ ಮನೆಯನ್ನು ಮಾರಿರುವುದು ಅವರ ದೃಡವಾದ ಇಚ್ಛಾಶಕ್ತಿ ಎಂತಹದು ಎಂದು ತಿಳಿಯುತ್ತದೆ ಎಂದರು.
ವೈಯಕ್ತಿಕ ಜೀವನದಲ್ಲಿ ಹಲವಾರು ತೊಂದರೆಗದ್ದರೈ ಅವುಗಳನ್ನು ಲೆಕ್ಕಿಸದೇ ವಚನಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿ ಜನಸಾಮಾನ್ಯರ ಜೀವನ ಬದಲಾಯಿಸುವಲ್ಲಿ ಮಹತ್ತರ ಪಾತ್ರಹೊಂದಿದ್ದಾರೆ. ಅವರ ಉನ್ನತ ವ್ಯಕ್ತಿತ್ವ ಮತ್ತು ಅವರ ವಚನ ಸಾಹಿತ್ಯ ದ ಮೇಲಿರುವ ಶ್ರದ್ಧೆಯನ್ನು ಗಮನಿಸಿದ ಮಠಾಧೀಶರು ಫ.ಗು ಹಳಕಟ್ಟಿಯವರನ್ನು ಒಬ್ಬ ಶರಣರಂತೆ ಭಾವಿಸಿ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಿದ್ದಾರೆ.ಅವರ ಸತತ ಪರಿಶ್ರಮದಿಂದ ಹೊರಬಂದ ಅವರ ವಚನ ಸಾಹಿತ್ಯದ ಸಂಗ್ರಹ ನಮಗೆಲ್ಲರಿಗೂ ಮಾದರಿಯಾಗಿದೆ.
ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಪ್ರತಿಯೊಬ್ಬರ ಮನೆಮನೆಗೆ ತಲುಪುವ ಕಾರ್ಯವಾಗಬೇಕು,ಯುವ ಜನಾಂಗದ ವಚನ ಸಾಹಿತ್ಯವನ್ನು ಅರಿತು ತಮ್ಮ ಜೀವನವನ್ನು ಕಟ್ಟಿಕೊಳ್ಳುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವ ಕಾರ್ಯವಾಗಬೇಕು ಎಂದು ಜಗದ್ಗುರು ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಡಾ ಸಂಗಮನಾಥ ಲೋಕಪೂರ ಉಪನ್ಯಾಸಕರಾಗಿ ಮಾತನಾಡಿ ಡಾ.ಫ.ಗು.ಹಳಕಟ್ಟಿಯವರು ಧಾರವಾಡದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿದ ನಂತರ ವಿಜಾಪುರದಲ್ಲಿ ತಮ್ಮ ವಕೀಲ ವೃತ್ತಿ ಪ್ರಾರಂಭಿಸಿದರು,ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ತಾಲೆಗರಿಯ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಲು ಪ್ರಾಂಭಿಸಿ ವಚನ ಸಾಹಿತ್ಯವನ್ನು ಉಳಿಸಲು ಪಣತೊಟ್ಟರು,1920ರ ಸಮಾರಿಗೆ ಸಾವಿರಾರು ಗ್ರಂಥಗಳ ಸಂಪಾದನೆ ಜೊತೆಗೆ ವಚನ ಸಂಗ್ರಹವನ್ನು ಮಾಡಿ ಸರಕಾರ ಯುಜಿಸಿ ಸಾರ್ವಜನಿಕ ಸಂಸ್ಥೆ ಗಳ ನೆರವಿಲ್ಲದೆ ಹಲವಾರು ವಚನಕಾರರನ್ನು ಬೆಳಕಿಗೆ ತರುವಲ್ಲಿ ಅವರು ಮಾಡಿದ ಮಹತ್ಕಾರ್ಯ ಇತಿಹಾಸ ನೆನಪಿಡುವಂತದಾಗಿದೆ ಎಂದರು.
ಕ್ರಿಶ್ಚಿಯನ್ ಮಿಷಿನರಿಯವರು ಇವರ ಗ್ರಂಥವನ್ನು ಮುದ್ರಿಸಲು ನಿರಾಕರಿಸಿದಾಗ ಮನೆಯನ್ನೇ ಮಾರಿ ಮುದ್ರಣಾಲಯನ್ನು 1926 ರಲ್ಲಿ ಸ್ಥಾಪಿಸಿ ಹಿತಚಿಂತಕ ಮುದ್ರಣಾಲಯ ಎಂದು ನಾಮಕರಣಗೊಳಿಸಿ ಮುದ್ರಣ ಕಾರ್ಯ ಆರಂಭ ಮಾಡಿ ಶಿವಾನುಭವ ಪತ್ರಿಕೆ ಕಾರ್ಯ ಪ್ರಾರಂಭಿಸಿ ವಚನ ಸಾಹಿತ್ಯ ಶಾಶ್ವತವಾಗಿ ಉಳಿಯುವಂತೆ ಮಾಡಿದರು.ಮೂಲಗ್ರಂಥ,ಟೀಕಾಗ್ರAಥಾ,ಸ್ವತAತ್ರಗ್ರAಥ,ಪಠ್ಯ ಪುಸ್ತಕ,ಗದ್ಯಗ್ರಂಥ,ಐತಿಹಾಸಿಕ ಗ್ರಂಥ,ಧಾರ್ಮಿಕ ಪುರುಷರ ಚರಿತ್ರೆ ಸೇರಿದಂತೆ 165 ಗ್ರಂಥಗಳ ಪ್ರಕಟಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
1926 ರಲ್ಲಿ ಬಳ್ಳಾರಿ ಯಲ್ಲಿ ನಡೆದ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು 1928ರ ಜೂನ್‌ನಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ 3ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರಕಾರದಿಂದ ರಾವ್ ಬಹದ್ದೂರ್ ಮತ್ತು ರಾವ್ ಸಾಹೇಬ ಪ್ರಶಸ್ತಿ, ವಚನ ಶಾಸ್ತç ಪ್ರವೀಣ, ವಚನ ಶಾಸ್ತç ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದವರು ಎಂದು ಫ.ಗು.ಹಳಕಟ್ಟಿಯವರ ಜೀವನ ಮತ್ತು ಸಾಧನೆಯ ಪ್ರಮುಖ ವಿಷಯಗಳನ್ನು ಉಪನ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಸ್ ಎನ್ ಬಳ್ಳಾರಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಗಣ್ಯ ರು ಹಾಜರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ಸರ್ವರಿಗೂ ಸ್ವಾಗತಿಸಿದರು.
ಕಾರ್ಯಕ್ರದಲ್ಲಿ ಮೃತ್ಯುಂಜಯ ಹಿರೇಮಠ ಮತ್ತು ತಂಡದವರು ವಚನ ಸಂಗೀತ ಪ್ರಸ್ತುತ ಪಡಿಸುವರು.
ಪ್ರೊ .ಆರ್.ಬಿ.ಚಿನಿವಾಲರ ಅವರು ಕಾರ್ಯಕ್ರಮ ನಿರೂಪಿಸಿದರು.