14.7 C
New York
Friday, May 9, 2025

Buy now

spot_img

ಗದಗ : ಜನತಾ ದರ್ಶನ ಎಂಬುದು ಒಂದು ರೀತಿಯ ಬಹಿರಂಗ ಸಂಸತ್ ಅಧಿವೇಶನವಾಗಿದೆ : ಸಚಿವ ಎಚ್ ಕೆ ಪಾಟೀಲ

ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಸಚಿವ ಎಚ್.ಕೆ. ಪಾಟೀಲ ಚಾಲನೆ

ಗದಗ, ಏಪ್ರಿಲ್ 19: “ಜನತಾ ದರ್ಶನ ಎಂಬುದು ಒಂದು ರೀತಿಯ ಬಹಿರಂಗ ಸಂಸತ್ ಅಧಿವೇಶನವಾಗಿದೆ” ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಮುಳಗುಂದ ಪಟ್ಟಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, “ಸರ್ಕಾರದ ಸೌಲಭ್ಯಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ಲಭ್ಯವಾಗಬೇಕು, ದಲ್ಲಾಳಿಗಳ ಮಧ್ಯಪ್ರವೇಶ ಇಲ್ಲದ ನೈಜ ಜನಪರ ಆಡಳಿತವೇ ಸರ್ಕಾರದ ಗುರಿ” ಎಂದರು.

ಸಾಕಾರಗೊಳ್ಳುತ್ತಿರುವ ಜನಪರ ಆಡಳಿತ
ಜನಸಾಮಾನ್ಯರು ತಮ್ಮ ಅಹವಾಲುಗಳನ್ನು ನೇರವಾಗಿ ಮಂಡಿಸಬಹುದಾದ ವೇದಿಕೆಯಾಗಿ ಜನತಾ ದರ್ಶನ ರೂಪುಗೊಂಡಿದ್ದು, ಮುಳಗುಂದದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಾರ್ವಜನಿಕರಿಂದ ಆಗಮಿಸಿದ ಹಲವಾರು ಅರ್ಜಿಗಳಿಗೆ ಸ್ಥಳದಲ್ಲೇ ಸ್ಪಂದನೆ ಸಿಗಲಿದೆ ಎಂದರು.

ಹಿಂದಿನ ಜನತಾ ದರ್ಶನಗಳಲ್ಲಿ ೯೫೧ ಅರ್ಜಿಗಳು ಪ್ರಥಮ ಹಂತದಲ್ಲಿ, ೩೫೨ ಅರ್ಜಿಗಳು ದ್ವಿತೀಯ ಹಂತದಲ್ಲಿ ಮತ್ತು ೮೫೫ ಅರ್ಜಿಗಳು ತೃತೀಯ ಹಂತದಲ್ಲಿ ಸ್ವೀಕೃತವಾಗಿವೆ. ಎಲ್ಲಾ ಅಹವಾಲುಗಳು ತಾರ್ಕಿಕವಾಗಿ ಅಂತ್ಯಗೊಳಿಸಲ್ಪಟ್ಟಿವೆ ಎಂದರು.

ಗ್ಯಾರಂಟಿ ಯೋಜನೆ – ರಾಷ್ಟ್ರಮಟ್ಟದಲ್ಲಿ ಮಾದರಿ ಸಾಧನೆ: “ಗದಗ ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ.98ರಷ್ಟು ಸಾಧನೆ ಮಾಡಿದ್ದು, ಇದು ರಾಜ್ಯ ಮಟ್ಟದಲ್ಲಿ ಮಾದರಿಯಾಗಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ರೂ.6,000 ಮೌಲ್ಯದ ಸೌಲಭ್ಯಗಳು ತಲುಪುತ್ತಿವೆ. ಇದು ದೇಶದ ಮಟ್ಟದಲ್ಲಿ ಕ್ರಾಂತಿಕಾರಿಯಾದ ಹೆಜ್ಜೆಯಾಗಿದೆ” ಎಂದು ಪಾಟೀಲ ಹೇಳಿದರು. ರಾಜ್ಯದಲ್ಲಿ ಇದುವರೆಗೆ 54 ಸಾವಿರ ಕೋಟಿ ರೂ. ಖರ್ಚುಮಾಡಿ ಭ್ರಷ್ಟಾಚಾರ ರಹಿತವಾಗಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು.

ಸಂವಿಧಾನ ಬೋಧಿಸಿದ ಹಾದಿಯಲ್ಲಿ ಸಾಗಿ : “ಅಧಿಕಾರಿಗಳು ಪ್ರಜೆಗಳನ್ನು ಮೇಲಿಂದ ಮೇಲೆ ನೋಡುವ ಮನೋಭಾವ ಬದಲಾಗಬೇಕು. ಪ್ರಜೆಗಳೇ ಪ್ರಭುಗಳು. ಸಂವಿಧಾನ ನಮಗೆ ಅಧಿಕಾರ ನೀಡಿದ್ದು ಸೇವೆಗಾಗಿ, ದರ್ಪ ತೋರಿಸಲು ಅಲ್ಲ” ಎಂದು ಅಧಿಕಾರಿಗಳಿಗೆ ಎಚ್.ಕೆ. ಪಾಟೀಲ ಕಿವಿಮಾತು ಹೇಳಿದರು. “ಸೌಜನ್ಯ ಹಾಗೂ ಸಹಾನುಭೂತಿಯೊಂದಿಗೆ ಆಡಳಿತ ನಡೆಯಬೇಕು” ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.

ಪೋಲೀಸ್ ವ್ಯವಸ್ಥೆ, ಸಾರ್ವಜನಿಕ ಸೇವೆಗಳಲ್ಲಿ ಸುಧಾರಣೆ : ಜಿಲ್ಲೆಯಲ್ಲಿ “ಥರ್ಡ್ ಐ” ತಂತ್ರಜ್ಞಾನದ ಮೂಲಕ ಸಂಚಾರಿ ನಿಯಮಗಳ ಪಾಲನೆ, ಪೋಲೀಸ್ ಮತ್ತು ನಾಗರಿಕರ ನಡುವೆ ಸದ್ಭಾವನೆಯ ಆಧಾರಿತ ಸಂಬಂಧ, ಅಪರಾಧ ನಿಯಂತ್ರಣದತ್ತ ಗದಗ ಜಿಲ್ಲೆಯ ಪೋಲೀಸ್ ಇಲಾಖೆಯ ಸಾಧನೆ ಹಿಗ್ಗಿ ಹೇಳುವಂತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರು 4–5 ಬಾರಿ ಗದಗ ಪೋಲೀಸರನ್ನು ಪ್ರಶಂಸಿಸಿದ್ದಾರೆ ಎಂದು ತಿಳಿಸಿದರು.

ಪ್ರತಿ ಗ್ರಾಮಕ್ಕೂ ಸ್ಮಶಾನಗಳು : “ಕಳೆದ 75 ವರ್ಷಗಳಲ್ಲಿ ಅಸಾಧ್ಯವಾಗಿದ್ದ ಎಲ್ಲಾ ಗ್ರಾಮಗಳಿಗೆ ಸ್ಮಶಾನ ನಿರ್ಮಾಣದ ಗುರಿ ಇಂದು ಸಾಕಾರವಾಗುತ್ತಿದೆ. ಗದಗ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಸ್ಮಶಾನಗಳನ್ನು ಕಲ್ಪಿಸಲಾಗಿದೆ” ಎಂದು ತಿಳಿಸಿದರು. ಗದಗ ಜಿಲ್ಲೆಯಲ್ಲಿ ಮುಂದಿನ ಹಂತದಲ್ಲಿ ಎಲ್ಲ ಗ್ರಾಮಗಳಿಗೂ ಸ್ಮಶಾನ ಒದಗಿಸುವ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಹುತೇಕ ಮಂದಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆಂದು ಅರಿತು, “ಜಿಲ್ಲಾಡಳಿತವು ವಿಶೇಷ ಕಾರ್ಯಾಚರಣೆ ಮೂಲಕ ಈ ಅಹವಾಲುಗಳಿಗೆ ಸ್ಪಂದಿಸಿ ಪರಿಹಾರ ನೀಡಿದೆ” ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡುತ್ತಾ, ಜನರಿಗಾಗಿ ಜನರಿಗೊಸ್ಕರ ಸರ್ಕಾರ ಎಂಬುದನ್ನು ಜನತಾ ದರ್ಶನ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಜನರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಹೆಮ್ಮೆಯ ಕಾರ್ಯಕ್ರಮ ಇಂದು ಮುಳಗುಂದದಲ್ಲಿ ನಡೆಯುತ್ತಿದೆ ಎಂದರು.

ಅಧಿಕಾರಿಗಳ ಜನಸ್ನೇಹಿ ವರ್ತನೆಯು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿತೆಂದರು. ಜನರಿಗೆ ಸೌಜನ್ಯಪೂರ್ಣ ಸೇವೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಅಧಿಕಾರಿ ಸಿಬ್ಬಂದಿಗಳೆಲ್ಲರೂ ಸಂಯಮದಿಂದ ವರ್ತಿಸಿ, ಜನಸಾಮಾನ್ಯರ ಕೆಲಸ ಸುಗಮವಾಗಿ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಳಗುಂದ ಪಟ್ಟಣ ಪಂಚಾಯತ್ ಅಧ್ಯಕ್ಷ ಯಲ್ಲಮ್ಮ, ಸದಸ್ಯರು ಷಣ್ಮುಖಪ್ಪ, ಬಸವರಾಜ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಎಸಿ ಗಂಗಪ್ಪ, ಡಿಸಿಎಪ್ ಸಂತೋಷಕುಮಾರ್ ಹಾಗೂ ಇತರ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ