ಗದಗ ಅಕ್ಟೋಬರ್ 7 : ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅಭಿವೃದ್ಧಿ ಕಾರ್ಯಗಳು ಶೀಘ್ರಗತಿಯಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಆಸಕ್ತಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೊಮವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ( ದಿಶಾ ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನರೇಗಾ ಯೋಜನೆಗೆ ನೇರವಾಗಿ ಅನುದಾನ ಬರುತ್ತಿದ್ದು ಗ್ರಾಮದ ಮೂಲಭೂತ ಸೌಲಭ್ಯಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಪಿಡಿಓ ಹಾಗೂ ತಾ.ಪಂ. ಇಒ ಗಳು ಶ್ರಮಿಸಬೇಕು. ವಿವಿಧ ಇಲಾಖೆಯ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ಸರಿಯಾದ ರೀತಿಯಲ್ಲಿ ತಲುಪಬೇಕು ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ತಮ್ಮ ಕಾರ್ಯ ಶೈಲಿಯಲ್ಲಿ ಸಕಾರಾತ್ಮಕ ಬದಲಾಯಿಣೆ ತಂದುಕೊAಡು ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಗದಗ ಜಿಲ್ಲೆಯು ತೋಟಗಾರಿಕೆಗೆ ಪೂರಕ ವಾತಾವರಣ ಹೊಂದಿದ್ದು ರೈತರು ಆದಾಯ ಹೆಚ್ಚಿಸುವುದರ ಬಗ್ಗೆ ಮನವರಿಕೆ ಮಾಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ವರ್ಷದಿಂದ ವರ್ಷಕ್ಕೆ ತೊಟಗಾರಿಕೆ ವಿಸ್ತರಣೆಯಾಗುವಂತೆ ಕ್ರಮ ವಹಿಸಬೇಕು. ಜನೌಷದಿ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸಿ ಬಡ ಜನರಿಗೆ ಉಪಯೋಗ ಆಗಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ನಿರ್ದೇಶನ ನೀಡಿದರು.
ಇದಕ್ಕೆ ಉತ್ತರ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲಾ ಜನೌಷಧಿ ಕೇಂದ್ರಗಳು ಸಮರ್ಪಕವಾಗಿ ಕೆಲಸಮಾಡುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ವಿಧಾಸ ಪರಿಷತ್ ಶಾಸಕ ಎಸ್.ವಿ.ಸಂಕನೂರ ಮಾತನಾಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಶಿಕ್ಷಕರು ಕೊರತೆಯಿದ್ದ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
ಕೃಷಿ ಇಲಾಖೆ ಅಧಿಕಾರಿ ಮಾತನಾಡಿ ಜಿಲ್ಲೆಯಲ್ಲಿ ರೈತರಿಗೆ ವಿತರಿಸಲು ರಸಗೊಬ್ಬರ ಮತ್ತು ಬೀಜಗಳು ಸಮರ್ಪಕ ಪ್ರಮಾಣದಲ್ಲಿ ಲಭ್ಯ ವಿದ್ದು ಯಾವುದೇ ರೀತಿಯ ಕೊರತೆಯಿರುವುದಿಲ್ಲ ವೆಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಹೆಸ್ಕಾಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಪರಿಶಿಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ. ಸಿ.ಇ ಓ ಭರತ್ ಎಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.