Friday, October 18, 2024
Google search engine
Homeಉದ್ಯೋಗಗದಗ : ಪಾರದರ್ಶಕ, ವ್ಯವಸ್ಥಿತ ಪರೀಕ್ಷೆಗಾಗಿ ಕ್ರಮ ವಹಿಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಗದಗ : ಪಾರದರ್ಶಕ, ವ್ಯವಸ್ಥಿತ ಪರೀಕ್ಷೆಗಾಗಿ ಕ್ರಮ ವಹಿಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ನಡೆಯುವ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಸಭೆ

ಗದಗ ಸಪ್ಟೆಂಬರ್25 : ಜಿಲ್ಲೆಯಲ್ಲಿ
ಸಪ್ಟೆಂಬರ್  29 ರಂದು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಜರುಗಲಿದ್ದು ಪರೀಕ್ಷೆಯನ್ನು ಪಾರದರ್ಶಕವಾಗಿ ಯಾವುದೇ ಅವ್ಯವಹಾರಗಳಿಗೆ ಆಸ್ಪದ ನೀಡದೇ ಸುವ್ಯವಸ್ಥಿತವಾಗಿ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.

ಜಿಲ್ಲಾಡಳಿತ ಭವನದ ಕೆಸ್ವಾನ್ ಹಾಲ್ ನಲ್ಲಿ ಬುಧವಾರ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ  ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ್ಯಾದಂತ 38 ಪರೀಕ್ಷಾ ಕೇಂದ್ರಗಳಲ್ಲಿ ಸಪ್ಟೆಂಬರ್ 29 ರಂದು  ಪರೀಕ್ಷೆ ಜರುಗಲಿದ್ದು ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ  ಬೆಳಿಗ್ಗೆ 10.30 ರಿಂದ ಮ. 12.30 ರವರೆಗೆ ಸುಗಮವಾಗಿ, ಯಾವುದೇ ಲೋಪದೋಷಗಳಿಲ್ಲದಂತೆ ನ್ಯಾಯಸಮ್ಮತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಪರೀಕ್ಷೆ ನಡೆಸಬೇಕು ಕರ್ನಾಟಕ ಪರೀಕ್ಷಾ  ಪ್ರಾಧಿಕಾರ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.

ತ್ರಿಸದಸ್ಯ ಸಮಿತಿ, ವೀಕ್ಷಕ ಹಾಗೂ ಮಾರ್ಗಾಧಿಕಾರಿಗಳ ನೇಮಕ: ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಯಲು  ತ್ರಿ-ಸದಸ್ಯ ಸಮಿತಿಯನ್ನುವೀಕ್ಷಕರನ್ನು, ಸ್ಥಳೀಯ ನಿರೀಕ್ಷಣಾಧಿಕಾರಿ ಹಾಗೂ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಕೊಂಡೊಯ್ಯುವ ಸಮಯದಲ್ಲಿ ಉಸ್ತುವಾರಿ ತಂಡಕ್ಕೆ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಪ್ರತಿಬಂಧಕಾಜ್ಞೆ ಜಾರಿ : ಪರೀಕ್ಷೆಗಳು ಸುಗಮವಾಗಿ ಜರುಗುವ ಮತ್ತು ಶಿಸ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪರಿಮಿತಿಯೊಳಗೆ ಅಂದು ಬೆಳಿಗ್ಗೆ 8 ರಿಂದ ಸಾಯಂಕಾಲ 6 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಐದು ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ಹಾಗೂ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರಗಳ ಪ್ರವೇಶವನ್ನು ನಿರ್ಬಂಧಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಸೈಬರ್ ಸೆಂಟರ್ , ಬುಕ್‌ಸ್ಟಾಲ್ , ಫೋಟೋ ಕಾಪಿಯರ್‌ಗಳನ್ನು ಬಂದ ಮಾಡಲು ಆದೇಶಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂದಿಸಿದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರಹೋಗುವ ಸಮಯದಲ್ಲಿ ಮಾತ್ರ ಚಿತ್ರೀಕರಿಸಲು ಮಾಧ್ಯಮದವರಿಗೆ ಅವಕಾಶವಿದ್ದು ಪರೀಕ್ಷಾ ಗೌಪ್ಯತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರದಲ್ಲಿ ಪ್ರಿಸ್ಕಿಂಗ್ ನಡೆಸುವ ಸಿಬ್ಬಂದಿಯೊಂದಿಗೆ ಮತ್ತು ಪರೀಕ್ಷಾ ಕೊಠಡಿಯ ಸಂವೀಕ್ಷಕರೊಂದಿಗೆ ಸಹಕರಿಸಿ ತಪಾಸಣೆಗೊಳಗಾಗುವುದು ಕಡ್ಡಾಯವಾಗಿದೆ.  ಮೊಬೈಲ್ / ಸೆಲ್ಯೂಲಾರ್ ಫೋನ್, ಟ್ಯಾಬ್ಲೆಟ್ , ಪೆನ್ ಡ್ರೈವ್ , ಬ್ಲೂ ಟೂತ್ ಡಿವೈಸ್ , ಸ್ಮಾರ್ಟ ವಾಚ್ , ಕ್ಯಾಲ್ಕುಲೇಟರ್ ಮತ್ತು ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳು ಅಥವಾ ಲಾಗ್ ಟೇಬಲ್ಸ್ , ಕೈ ಚೀಲ , ಪರ್ಸ , ನೋಟುಗಳು , ಚಾರ್ಟ, ಬಿಡಿ ಹಾಳೆಗಳು ಅಥವಾ ರೆಕಾರ್ಡಿಂಗ್ ವಸ್ತುಗಳನ್ನೂ ಸೇರಿದಂತೆ ಇನ್ನಿತರೆ ಯಾವುದೇ ರೀತಿಯ ಉಪಕರಣಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಹೀಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿರುತ್ತದೆ.

ಡ್ರೆಸ್‌ಕೋಡ್ : ಅಭ್ಯರ್ಥಿಗಳು ಪರೀಕ್ಷಾಪ್ರವೇಶ ಪತ್ರದಲ್ಲಿ ತಿಳಿದಿರುವಂತೆ ಪರೀಕ್ಷೆ ವೇಳೆಯಲ್ಲಿ.ಶೂ, ಸಾಕ್ಸ್ಗಳನ್ನು ಧರಿಸಲು ಅವಕಾಶವಿರುವುದಿಲ್ಲ. ಸಾಧಾರಣ ಚಪ್ಪಲಿಯನ್ನು ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣಗಳು, ಮೊಬೈಲ್, ಬ್ಲೂ ಟೂಥ್ , ವೈಟ್ ಫ್ಲುಡ್ , ವೈರ್‌ಲೆಸ್ ಸೆಟ್ಸ್ , ಪೇಪರ್ , ಬುಕ್ಸ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ . ತುಂಬು ತೋಳಿನ ಶರ್ಟ್ ಮತ್ತು ಯಾವುದೇ ಆಭರಣಗಳನ್ನು ಮೆಟಲ್ ಮತ್ತು ನಾನ್ ಮೆಟಲ್(ಮಂಗಳ ಸೂತ್ರ ಹಾಗೂ ಕಾಲುಂಗುರಗಳನ್ನು ಹೊರತುಪಡಿಸಿ) ಪುಲ್ಲೋವರ್ಸ, ಜಾಕೆಟ್ ಮತ್ತು ಸ್ವೆಟರ್ಸಗಳನ್ನು ಧರಿಸಿ ಹಾಜರಾಗುವುದನ್ನು ನಿಷೇಧಿಸಿದೆ. ಮೆಟಲ್ ವಾಟರ್ ಬಾಟಲ್ ಮತ್ತು ನಾನ್ ಟ್ರಾನ್ಸಪರಂಟ್ ವಾಟರ್ ಬಾಟಲ್‌ಗಳನ್ನು ನಿಷೇಧಿಸಿದೆ. ಕಿವಿ, ಬಾಯಿಯನ್ನು ಮುಚ್ಚಿಕೊಳ್ಳುವಂತೆ ಅಥವಾ ಯಾವುದೇ ರೀತಿಯ ಫಿಲ್ಟರ್ ಇರುವ ಫೇಸ್ ಮಾಸ್ಕ್ ಅನ್ನು ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುಮತಿ ನೀಡಬಾರದು. ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿ ಬರುವ ಅಭ್ಯರ್ಥಿಗಳು ಮತ್ತು ಹೀಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 2 ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡಬೇಕಾಗಿರುತ್ತದೆ. ಹೀಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸುವುದು. ಅಭ್ಯರ್ಥಿಗಳ ಕಿವಿಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋ ಫೋನ್ ಬಳಸದಿರುವ ಬಗ್ಗೆ ಎಲ್‌ಇಡಿ ಬ್ಯಾಟರಿಯನ್ನು ಬಳಸಿ ಕಿವಿಗಳನ್ನು ತಪಾಸಣೆ ನಡೆಸುವುದು.ಎರಡನೇ ಹಂತದಲ್ಲಿ ಪರೀಕ್ಷಾ ತಪಾಸಣೆ ನಡೆಸಿದ ನಂತರ ಎಲ್ಲಾ ಅಭ್ಯರ್ಥಿಗಳ ಗುರುತಿನ ದಾಖಲೆ/ಚೀಟಿ ಮತ್ತು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿ ಅವರುಗಳ ಅಭ್ಯರ್ಥಿತ್ವದ ಬಗ್ಗೆ ಖಚಿತಪಡಿಸಿಕೊಂಡ ನಂತರವೇ ಪರೀಕ್ಷಾ ಉಪ ಕೇಂದ್ರದ ಒಳಗೆ ಪ್ರವೇಶಿಸಲು ಅನುಮತಿಸತಕ್ಕದ್ದು

ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ತಿಳಿಸಿರುವ ವಸ್ತ್ರ ಸಂಹಿತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು.ಪ್ರಾಧಿಕಾರವು ನಿಗದಿಪಡಿಸಿರುವ ಸೂಚನೆಗಳನ್ನು ಸಂಬಂಧಪಟ್ಟವರು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿ.ಪಂ ಸಿ ಇ ಒ  ಭರತ್ ಎಸ್ ಅವರು ಮಾತನಾಡಿ ಪರೀಕ್ಷೆಗಳು ಪಾರದರ್ಶಕವಾಗಿ ಜರುಗಬೇಕು ಎನ್ನುವ ಹಿತದೃಷ್ಟಿಯಿಂದಲೇ ಪರೀಕ್ಷಾರ್ಥಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೊಳಪಡಿಸಲಾಗುತ್ತದೆ. ಪರೀಕ್ಷಾ ಕೊಠಡಿಯಿಂದ ಯಾವುದೇ ಪ್ರಶ್ನೆ ಪತ್ರಿಕೆ / ಓಎಂಆರ್ ಉತ್ತರ ಹಾಳೆ/ ಪ್ರಶ್ನೆ ಸಹಿತ ಉತ್ತರ ಪುಸ್ತಕ ಹೊರಹೋಗದಂತೆ ಜಾಗೃತೆ ವಹಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಕೊಠಡಿ ಸಂವೀಕ್ಷಕರು ಅಭ್ಯರ್ಥಿಗಳ ಚಲನವಲನಗಳನ್ನು ಆಗಿಂದಾಗ್ಗೆ ಸೂಕ್ಷ್ಮವಾಗಿ ಗಮನಿಸಿ, ಯಾವುದೇ ಅಭ್ಯರ್ಥಿ ಸಂಶಯಾತ್ಮಕವಾಗಿ ವರ್ತಿಸುತ್ತಿದ್ದಲ್ಲಿ ತಕ್ಷಣ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ, ಗೋಡೆ ಗಡಿಯಾರಗಳ ಅಳವಡಿಕೆ,ಪರೀಕ್ಷಾ ಸಮಿತಿಯ ಸದಸ್ಯರುಗಳ ನಿರ್ವಹಿಸಬೇಕಾದ ವಿವಿಧ ಕರ್ತವ್ಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ,ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗ ಮಸನಾಯಕ ಮತ್ತು  ಬಿ.ಜಿ ಗಿರಿತಿಮ್ಮನಣ್ಣವರ,ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು, ಮೇಲ್ವಿಚಾರಕರು, ಸಮನ್ವಯ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಲೋಕ ಕಲ್ಯಾಣಕ್ಕಾಗಿ ರಾಮಾಯಣ ಮಹಾಗ್ರಂಥ ಅರ್ಪಿಸಿದವರು ಮಹರ್ಷಿ ವಾಲ್ಮೀಕಿ ಗದಗ : ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿ ಕಣ್ಮುಚ್ಚಿದ ವಿದ್ಯುತ್‌ ದೀಪಗಳು ಗದಗ : “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹುಬ್ಬಳ್ಳಿ : ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿ ಮುಂದುವರೆಸಲು ಆಗ್ರಹ  ಹುಬ್ಬಳ್ಳಿ : ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ  ಗದಗ : ಒಳ ಮೀಸಲಾತಿಯನ್ನು ಜಾರಿ ಮಾಡಲು ಮಾದಿಗ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಹುಬ್ಬಳ್ಳಿ : ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇಸ್ಮಾಯಿಲ್ ಸಾಬ್ ಕಾಲೇಬುಡ್ಡೆ ನಿಧನ ಗದಗ : ವಿವಿಧ ಅರ್ಜಿ ಆಹ್ವಾನ ಗದಗ : ನರೇಗಾ ನೆರವು ಪಡೆದು ಬದುಕು ಬದಲಾಗಿಸಿಕೊಳ್ಳಿ : ಚಂದ್ರಶೇಖರ ಬಿ ಕಂದಕೂರ ಹುಬ್ಬಳ್ಳಿ : ಉತ್ತರ ಕರ್ನಾಟಕ ಹೋರಾಟ ವೇದಿಕೆಯಿಂದ ಹುಬ್ಬಳ್ಳಿ , ಧಾರವಾಡ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ