ಲಕ್ಷ್ಮೇಶ್ವರ: ಆ :28: ಕೇಂದ್ರ ಸರ್ಕಾರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಬೇಕು ಎಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಕೆ.ಲಮಾಣಿ ಹೇಳಿದರು.
ಅವರು ಕೇಂದ್ರ ಸಂವಹನ ಇಲಾಖೆ ಧಾರವಾಡ , ತಾಲೂಕ ಆಡಳಿತ, ತಾಲೂಕು ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ ಕೃಷಿ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮಾತನಾಡಿ ಪ್ರತಿ ಮನೆಗೂ ಗ್ಯಾಸ್ ಕನೆಕ್ಷನ್, ನಲ್ಲಿಯ ಮೂಲಕ ನೀರು ಸರಬರಾಜು ಸೇರಿದಂತೆ ಹೆದ್ದಾರಿಗಳ ನಿರ್ಮಾಣ ಸ್ಮಾರ್ಟ್ ಸಿಟಿ ಗಳ ಕಾರ್ಯಕ್ರಮಗಳು ಉಡಾನ್ ವಿಮಾನ ನಿಲ್ದಾಣಗಳು ಹೀಗೆ ಹತ್ತು ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಈ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಕರೆ ನೀಡಿದರು. ಕಿಸಾನ್ ಸಮ್ಮಾನ್ ಯೋಜನೆ, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಜನಸಾಮಾನ್ಯರನ್ನು ತಲುಪಬೇಕು ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್ ಬಾಳೇಶ್ವರ ಮಠ, ಕೇಂದ್ರ ಸರ್ಕಾರ ಬ್ರಿಟಿಷರ ಕಾಲದ ಕಾನೂನುಗಳಿಗೆ ತಿದ್ದುಪಡಿ ತಂದು ಕಾನೂನುಗಳನ್ನು ನ್ಯಾಯಪರವಾಗಿಸಿದೆ. ಮುಖ್ಯವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಕಾನೂನುಗಳನ್ನು ಹೆಚ್ಚು ಜನಪರವಾಗಿಸಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲಕ್ಷ್ಮೇಶ್ವರ ತಹಸೀಲ್ದಾರ್, ವಾಸುದೇವ ವಿ.ಸ್ವಾಮಿ, ಮಾತನಾಡಿ, ಸರಕಾರ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಪುರಸಭೆಯ ಸದಸ್ಯರು ಸೇರಿದಂತೆ
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ, ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ, ತೋಟಗಾರಿಕಾ ಸಹಾಯಕ ನಿರ್ದೇಶಕ ರಮೇಶ ಹಾವರೆಡ್ಡಿ, ತಾಲೂಕ ಅರೋಗ್ಯಧಿಕಾರಿ ಸುಭಾಷ ದಾಯಗೊಂಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೃತ್ಯುಂಜಯ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಶ್ರೀಕಾಂತ ಕಾಟೆವಾಲೆ, ಬಿ. ಎಸ್. ಹಿರೇಮಠ, ಎ.ಸಿ.ಡಿ.ಪಿ.ಓ ಅನ್ನಪೂರ್ಣ ಮತ್ತು ಸಿಬ್ಬಂಧಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮುಂತಾದವರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಂವಹನ ಇಲಾಖೆಯ ಕಾರ್ಯಕ್ರಮ ರ ಸಂಯೋಜಕ ಮುರಳೀಧರ ಕಾರಭಾರಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನದ ಅಂಗವಾಗಿ ಶಾಸಕರು ಸಸಿಯನ್ನು ನೆಡುವ ಮೂಲಕ ಚಾಲನೆಯನ್ನು ನೀಡಿದರು.