ಗದಗ 11: ಜಿಲ್ಲೆಯ ಅಂಗನವಾಡಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಗುಣಮಟ್ಟದ ಪೌಷ್ಟಿಕಾಂಶಯುಕ್ತ ಮಕ್ಕಳ ಅಭಿರುಚಿಗನುಸಾರ ಆಹಾರ ಒದಗಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಸಿ.ಎಸ್.ಶಿವನಗೌಡರ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಅಂಗನವಾಡಿಗಳ ಒಟ್ಟಾರೆ ವ್ಯವಸ್ಥೆ ಸುಧಾರಣೆಯಾಗಬೇಕು ಎಂದರು.
ಉಚ್ಛ ನ್ಯಾಯಾಲಯದ ಆದೇಶದನ್ವಯ ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಹಾಗೂ ಅಪೌಷ್ಟಿಕತೆ ನಿವಾರಣಾ ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷರೂ ಆದ ವೇಣುಗೋಪಾಲಗೌಡ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಸದರಿ ಸಮಿತಿಯ ಅಧ್ಯಕ್ಷರು ಅಂಗನವಾಡಿಗಳ ಸ್ಥಿತಿಗತಿಯ ಬಗ್ಗೆ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ವಿ.ಸಿ.ಮೂಲಕ ಚರ್ಚಿಸಿ ಮೇಲಿಂದ ಮೇಲೆ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಕಳುಹಿಸಿಕೊಡುವಂತೆ ಸೂಚಿಸಿದ ಮೇರೆಗೆ, ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಈಗಾಗಲೇ ಗದಗ ಜಿಲ್ಲೆಯಲ್ಲಿನ ಪ್ರತಿ ತಾಲೂಕಿಗೆ ಸಂಬಂಧಿಸಿದಂತೆ ಕೆಲವೊಂದು ಅಂಗನವಾಡಿಗಳಿಗೆ ಭೆಟ್ಟಿ ನೀಡಿ ಪರಿಶೀಲಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲತಾಲೂಕುಗಳ ಆಯ್ದ ಅಂಗನವಾಡಿಗಳಿಗೆ ಭೇಟಿ ನೀಡಿ ಅಂಗನವಾಡಿಗಳ ಮೂಲ ಸೌಕರ್ಯಗಳನ್ನು ಪರಿಶೀಲಿಸಿದಾಗ ಕೆಲವು ನ್ಯೂನತೆಗಳು ಕಂಡು ಬಂದಿದ್ದು ಸರಿಪಡಿಸುವಂತೆ ಸೂಚಿಸಲಾಗಿದೆ. ಆದರೆ ಕೆಲವೊಂದು ಅಂಗನವಾಡಿಗಳಿಗೆ ಭೆಟ್ಟಿ ಕೊಟ್ಟಾಗ ಸ್ಥಳಾವಕಾಶದ ಕೊರತೆ ಇರುವುದು ಮತ್ತು ಅಂಗನವಾಡಿಗಳ ಮುಂದೆಯೇ ಚರಂಡಿ ಇರುವುದರಿಂದ ಮಕ್ಕಳಿಗೆ ಬಹಳಷ್ಟು ತೊಂದರೆ ಆಗುತ್ತಿರುವುದು ಕಂಡು ಬಂದಿದ್ದು, ಮತ್ತು ಈ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ನಿರ್ದೇಶನ ಕೊಟ್ಟಿರುತ್ತೇವೆ. ಸ್ವಚ್ಛತೆ ಬಗ್ಗೆ ಗಮನ ಹರಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಹಾಗೂ ಸಂಬಂಧಪಟ್ಟ ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದರು.
ಮಕ್ಕಳಿಗೆ ಮುಂಜಾನೆ ಮಿಲೆಟ್ ಲಾಡು ಕೊಡುತ್ತಾರೆ ಹಾಗೂ 3 ದಿನ ಅನ್ನ ಸಾಂಬಾರು, 3 ದಿನ ಉಪ್ಪಿಟ್ಟು ಕೊಡುತ್ತಿದ್ದು ಹಾಗೂ ಮೊಟ್ಟೆಯನ್ನು ಕೊಡುತ್ತಾರೆ ಇದನ್ನು ಬಹಳಷ್ಟು ಮಕ್ಕಳು ಇಷ್ಟ ಪಡುವುದಿಲ್ಲವೆಂದು ಮಕ್ಕಳ ಪೆÇೀಷಕರು ತಿಳಿಸಿರುತ್ತಾರೆ. ಆದ್ದರಿಂದ ಬೇರೆ ಬೇರೆ ರುಚಿಕರವಾದ ಆಹಾರ ನೀಡಲು ಹಾಗೂ ಸ್ವಚ್ಛತೆ ಕಾಪಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಹೊಸದಾಗಿ ಅಂಗನವಾಡಿ ಕಟ್ಟುವಾಗ ದೊಡ್ಡ ಪ್ರಮಾಣದಲ್ಲಿ ಕಂಪೌಂಡ ಸಹಿತ ಅಂಗನವಾಡಿ ಕಟ್ಟಿದಲ್ಲಿ ಮಕ್ಕಳಿಗೆ ಅನುಕೂಲವಾಗುತ್ತದೆ. ಯಾಕೆಂದರೆ ಮಕ್ಕಳಿಗೆ ಶಾಲೆಯಲ್ಲಿಯೇ ಕುಳಿತು ಆಟವಾಡಲು ಆಟದ ಸಾಮಗ್ರಿಗಳು ಇದ್ದು ಅವುಗಳನ್ನು ಬಳಸಿಕೊಂಡು ಮಕ್ಕಳು ಆಟ ಆಡಲು ಅಂಗನವಾಡಿ ಕಟ್ಟಡ ದೊಡ್ಡದು ಅವಶ್ಯವಿದೆ ಎಂದರು.
ಒಟ್ಟಾರೆ ಅಂಗನವಾಡಿಗಳು ಇನ್ನು ಸುಧಾರಣೆ ಆಗಬೇಕು, ಮೇಲಿಂದ ಮೇಲೆ ಅಂಗನವಾಡಿ ಸಮೀಪ ಇರುವ ಸರ್ಕಾರಿ ವೈದ್ಯರು ಅಂಗನವಾಡಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ಮಕ್ಕಳ ಆರೋಗ್ಯ ಪರೀಕ್ಷಿಸಬೇಕು. ಸುಧಾರಣೆಗೆ ಕ್ರಮವಹಿಸಿ ಮಕ್ಕಳಿಗೆ ಒಳ್ಳೆಯ ವಾತಾವರಣ, ಶುದ್ಧ ಕುಡಿಯುವ ನೀರು, ಶುಚಿ ರುಚಿಯಾದ ಊಟ ಕಲ್ಪಿಸಿ ಮಕ್ಕಳು ದಿನನಿತ್ಯ ಅಂಗನವಾಡಿಗೆ ಬರವಂತೆ ವಾತಾವರಣ ಸೃಷ್ಟಿಸಬೇಕು, ಅಪೌಷ್ಟಿಕತೆಯನ್ನು ತಡೆಯಲು ಕ್ರಮವಹಿಸಬೇಕು, ಮಕ್ಕಳೇ ಈ ದೇಶದ ಆಸ್ತಿ. ಆರೋಗ್ಯವಂತ, ಶಿಕ್ಷಣವಂತ ಮಕ್ಕಳನ್ನು ರೂಪಿಸುವಲ್ಲಿ ಮೂಲ ಬುನಾದಿ ಅಂಗನವಾಡಿ ಕೇಂದ್ರಗಳು. ಶಿಕ್ಷಕಿಯರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅಂಗನವಾಡಿ ಹಾಗೂ ಅಂಗನವಾಡಿ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಸರ್ಕಾರದಿಂದ ಬರುವ ಸೌಲಭ್ಯಗಳು ಸದ್ಭಳಕೆಯಾಗಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು 1248 ಅಂಗನವಾಡಿ ಕೇಂದ್ರಗಳಿದ್ದು 930 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 220 ಬಾಡಿಗೆ ಕಟ್ಟಡದಲ್ಲಿ ಹಾಗೂ 98 ಅಂಗನವಾಡಿಗಳು ಶಾಲೆ, ಸಮುದಾಯ ಭವನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ಒದಗಿಸಿದರು.
ಈ ಸಂದರ್ಭದಲ್ಲಿ ವಾರ್ತಾಧಿಕಾರಿ ವಸಂತ ಮಡ್ಲೂರ, ಬಸವರಾಜ ಕುಕನೂರ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು.