ಶತಮಾನದ ಹೊಸ್ತಿಲಲ್ಲಿ ಬೆಳಗಾವಿ ಹಿಂಡಲಗಾ ಜೈಲು.

ಬೆಳಗಾವಿ : ಬ್ರಿಟೀಷರ ಕಾಲದಲ್ಲಿ ಆರಂಭವಾದ ಬೆಳಗಾವಿಯ ಹಿಂಡಲಗಾದಲ್ಲಿರುವ ಐತಿಹಾಸಿಕ ಕೇಂದ್ರ ಕಾರಾಗೃಹ ಶತಮಾನದ ಹೊಸ್ತಿಲಲ್ಲಿದೆ. ಸ್ವಾತಂತ್ರ್ಯ ಹೋರಾಟಗಾರರು, ಪ್ರಮುಖ ರಾಜಕಾರಣಿಗಳು, ಕುಖ್ಯಾತಿಗಳು ಈ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದ್ದಾರೆ.ಸ್ವಾತಂತ್ರ್ಯ ಪೂರ್ವ, ತುರ್ತು ಪರಿಸ್ಥಿತಿ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಹಲವು ಪ್ರಮುಖರು ಸೆರೆವಾಸಕ್ಕೆ ಒಳಗಾಗಿದ್ದಾರೆ. 2023ಕ್ಕೆ ಈ ಕಾರಾಗೃಹಕ್ಕೆ ಒಂದು ನೂರು ವರ್ಷ ತುಂಬಲಿದೆ.ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ನವೀಕರಣಗೊಳಿಸಿ ಶತಮಾನೋತ್ಸವ ಆಚರಿಸುವ ಸಿದ್ಧತೆಗೆ ಸದ್ಯದಲ್ಲೇ ಚಾಲನೆ ದೊರೆಯಲಿದೆ. ಸುಣ್ಣ- ಬಣ್ಣ, ದುರಸ್ತಿ ಸೇರಿದಂತೆ ನವೀಕರಣ ಮಾಡಲಾಗುತ್ತದೆ. ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಮಾಹಿತಿ ಪ್ರಕಾರ ಮುಂದಿನ 2023ಕ್ಕೆ ಶತಮಾನೋತ್ಸವ ಆಚರಿಸಲಾಗುತ್ತದೆ. ಕಳೆದ 1923ರಲ್ಲಿ ಆರಂಭವಾದ ಈ ಕೇಂದ್ರ ಕಾರಾಗೃಹದಲ್ಲಿ ಇದುವರೆಗೆ 137 ಮಂದಿ ಯನ್ನು ಗಲ್ಲಿಗೇರಿಸಲಾಗಿದೆ. ಅಂಡೋಮಾನ್ ನಿಕೋಬಾರ್ ನಲ್ಲಿರುವಂತೆ ಈ ಕಾರಾಗೃಹದಲ್ಲಿ ವ್ಯವಸ್ಥೆ ಇದ್ದು, ದೇಶದ ಕೆಲವೇ ಬಂಧಿಖಾನೆಗಳಲ್ಲಿ ಇದು ಕೂಡ ಒಂದು.ಹಲವು ವಿಶೇಷತೆಗಳಿಗೆ ಹಿಂಡಲಗಾ ಜೈಲು ಹೆಸರುವಾಸಿ. ಮರಣದಂಡನೆ ಶಿಕ್ಷೆಗೆ ಗುರಿಯಾದವರಿಗೆ ಗಲ್ಲಿಗೇರಿಸುವ ವ್ಯವಸ್ಥೆ ಇಲ್ಲಿದೆ. ಗಲ್ಲುಗೇರಿಸುವ ವ್ಯವಸ್ಥೆ ಇರುವ ರಾಜ್ಯದ ಏಕೈಕ ಕಾರಾಗೃಹ. ಕಳೆದ 1984 ರಿಂದ ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳನ್ನು ಗಲ್ಲಿಗೇರಿಸಿಲ್ಲ.ಗಲ್ಲಿಗೇರಿಸಿದ ಬಳಿಕ ಪರಿಣಿತ ವೈದ್ಯರು ಮೃತಪಟ್ಟಿರುವುದನ್ನು ದೃಢೀಕರಿಸಬೇಕು. ನಂತರ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಗುವುದು. ಇಲ್ಲವೇ ಆಯಾ ಧರ್ಮೀಯರ ಪದ್ಧತಿಯಂತೆ ಜೈಲಿನ ವತಿಯಿಂದಲೇ ಸಂಸ್ಕಾರ ನೆರವೇರಿಸಲಾಗುವುದು. ಈ ಕಾರಾಗೃಹದಲ್ಲಿ ಸುಮಾರು 1162 ಕೈದಿಗಳಿಗೆ ಅವಕಾಶವಿದ್ದು, ಸದ್ಯಕ್ಕೆ 945 ಮಂದಿ ಇದ್ದಾರೆ.ಇವರಲ್ಲಿ ವಿಚಾರಣಾೀನ ಹಾಗೂ ಶಿಕ್ಷೆಗೆ ಗುರಿಯಾದವರು ಸೇರಿದ್ದಾರೆ. ಈತನಕ 219 ಪುರುಷ ಮತ್ತು 16 ಮಹಿಳೆಯರು ಸೇರಿದಂತೆ 235 ಮಂದಿ ಜೀವಾವ ಶಿಕ್ಷೆಗೆ ಗುರಿಯಾಗಿ ಜೈಲುವಾಸ ಅನುಭವಿಸಿದ್ದಾರೆ. ಒಂದು ನೂರು ಎಕರೆ ವಿಸ್ತೀರ್ಣ ಹೊಂದಿರುವ ಈ ಕಾರಾಗೃಹದಲ್ಲಿ ಕೈದಿಗಳಿಗೆ ಹಸು ಸಾಕಾಣೆ, ಮರಗೆಲಸ, ಟೈಲರಿಂಗ್, ನೇಯ್ಗೆ, ಕೃಷಿ, ತೋಟಗಾರಿಕೆ ಸೇರಿದಂತೆ ಹಲವು ಉದ್ಯೋಗಗಳಿಗೆ ಅವಕಾಶವಿದೆ. 22 ಎಕರೆ ಪ್ರದೇಶದಲ್ಲಿ ಜೈಲಿದ್ದು, ಕಬ್ಬು, ಭತ್ತ, ಬಾಳೆ ಬೆಳೆಯಲಾಗುತ್ತಿದೆ.ಆಸ್ಪತ್ರೆಯೂ ಇದ್ದೂ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಎಲ್ಲರಿಗೂ ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಎರಡು ಲಕ್ಷ ಮಾಸ್ಕ ಗಳನ್ನು ಕೈದಿಗಳೇ ತಯಾರಿಸಿದ್ದು, ಮಾರಾಟ ಮಾಡಲಾಗಿದೆ. ಕೈದಿಗಳ ಮನ ಪರಿವರ್ತನೆಗಾಗಿ ಗ್ರಂಥಾಲಯ, ಕ್ರೀಡೆಯ ವ್ಯವಸ್ಥೆಯೂ ಇದೆ. ಧ್ಯಾನ ಮಾಡಲು ಧ್ಯಾನ ಕೇಂದ್ರದ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರಾಗೃಹದ ಮ್ಯಾನುಯಲ್ ಅನುಗುಣವಾಗಿ ತಿಂಡಿ, ಊಟದ ವ್ಯವಸ್ಥೆ ಇದೆ. ಹಬ್ಬಗಳಲ್ಲಿ ವಿಶೇಷ ಭೋಜನ. ಜತೆಗೆ ವಾರಕ್ಕೊಮ್ಮೆ ಮಾಂಸಹಾರವನ್ನು ನೀಡಲಾಗುತ್ತದೆ.ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಆರಂಭಿಸಿರುವಂತೆ ಈ ಜೈಲಿನಲ್ಲೂ ಎಫ್ ಎಂ ಮೂಲಕ ಹಾಡು ಕೇಳುವ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.ಎನ್‍ಜಿಒ ನೆರವಿನೊಂದಿಗೆ ಆರಂಭವಾಗಲಿರುವ ಈ ಸೇವೆಯು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಹೊಂದಿದೆ. ಕೈದಿಗಳು ಹಾಡುಗಳನ್ನು ಆಲಿಸಬಹುದಾಗಿದೆ. ಶೀಘ್ರವಾಗಿ ಈ ಸೇವೆಯೂ ಕೈದಿಗಳಿಗೆ ದೊರಕಲಿದೆ. ಕಾರಾಗೃಹದಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ.

Leave a Reply

Your email address will not be published. Required fields are marked *