ಹಿರಿಯೂರು ಬಳಿ ಭೀಕರ ಸರಣಿ ಅಪಘಾತ , ಗದಗದ ನಾಲ್ವರು ರೈತರ ಬಲಿ

ಚಿತ್ರದುರ್ಗ,ಡಿ.13- ಈರುಳ್ಳಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಟೈರ್ ಸೋಟಗೊಂಡು ಮಗುಚಿ ಬೀಳುತ್ತಿದ್ದಂತೆ ಹಿಂಬದಿಯಿಂದ ಬರುತ್ತಿದ್ದ ಲಾರಿಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಸರಣಿ ಅಪಘಾತ ಸಂಭವಿಸಿ, ಸ್ಥಳದಲ್ಲೇ ನಾಲ್ವರು ರೈತರು ಮೃತಪಟ್ಟಿರುವ ದಾರುಣ ಘಟನೆ ಇಂದು ಮುಂಜಾನೆ ಹಿರಿಯೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.ಘಟನೆಯಲ್ಲಿ ಗದಗ ಜಿಲ್ಲೆಯ ಹುಯಿಲುಗೊಳದ ಹನುಮಪ್ಪ(30), ಪ್ರಶಾಂತ್ ಹಟ್ಟಿ(36), ರಮೇಶ್(26) ಮತ್ತು ಗುರಪ್ಪ ಹೂಗಾರ್(30) ಮೃತಪಟ್ಟಿದ್ದಾರೆ

. ಇಂದು ಬೆಳಗಿನ ಜಾವ ಚಿತ್ರದುರ್ಗ ಕಡೆಯಿಂದ ಬೆಂಗಳೂರು ಕಡೆಗೆ ಈರುಳ್ಳಿ ತುಂಬಿಕೊಂಡು ಲಾರಿ ತೆರಳುತ್ತಿತ್ತು. ಹಿರಿಯೂರು ಬೈಪಾಸ್‍ನ ಆಲೂರು ಕ್ರಾಸ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಲಾರಿಯ ಟೈರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಘಟನೆಯಲ್ಲಿ ನಾಲ್ವರು ರೈತರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಕ್ಲೀನರ್ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಆನಂದ(24) ಮತ್ತು ಗದಗ ತಾಲ್ಲೂಕಿನ ಹುಯಿಲಗೊಳದ ಸಂಗಪ್ಪ.ಬಿ ಹಂಚಿನಾಳ(45) ಗಾಯಗೊಂಡಿದ್ದಾರೆ. ಇದೇ ವೇಳೆ ಈ ಮಾರ್ಗದಲ್ಲಿ ಹಿಂದಿನಿಂದ ಬರುತ್ತಿದ್ದ 5 ಲಾರಿಗಳು, ಒಂದು ಕಾರು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಸರಣಿ ಅಪಘಾತ ಸಂಭವಿಸಿದ್ದರಿಂದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಸರಣಿ ಅಪಘಾತದಿಂದಾಗಿ ಸುಮಾರು 1 ಕಿ.ಮೀ ದೂರದವರೆಗೂ ವಾಹನಗಳು ಸಾಲಾಗಿ ನಿಂತಿದ್ದು ಕಂಡುಬಂದಿತು. ಸುದ್ದಿ ತಿಳಿಯುತ್ತಿದ್ದಂತೆ ಎಸ್‍ಪಿ ರಾಕಾ, ಡಿವೈಎಸ್ಪಿ ರೋಷನ್ ಜಮೀರ, ಸಿಪಿಐ ಶಿವಕುಮಾರ್ ಸ್ಥಳಕ್ಕೆ ದೌಡಾಯಿಸಿ ಲಾರಿಯೊಳಗೆ ಸಿಕ್ಕಿಕೊಂಡು ಮೃತಪಟ್ಟಿದ್ದ ನಾಲ್ವರು ರೈತರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.ನಂತರ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸರಣಿ ಅಪಘಾತವಾಗಿ ಗಾಯಗೊಂಡವರನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಣಿ ಅಪಘಾತವಾದ 5 ಲಾರಿಗಳ ಪೈಕಿ 4 ಲಾರಿಗಳಲ್ಲೂ ಈರುಳ್ಳಿ ಲೋಡ್ ಮಾಡಲಾಗಿತ್ತು.ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ ತುಂಬಾ ಈರುಳ್ಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡುಬಂತು. ಹಿರಿಯೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *