ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ : ಪ್ರತಿ ಮನೆಗೂ 10 ಸಾವಿರ ಲೀಟರ್ ಉಚಿತ ನೀರು

ಬೆಂಗಳೂರು : ವಿಧಾನಸಭೆ ಚುನಾವಣೆ ಹೊತ್ತಲ್ಲೇ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಪ್ರತಿ ತಿಂಗಳಿಗೆ 10,000 ಲೀಟರ್ ಕುಡಿಯುವ ನೀರು ಉಚಿತವಾಗಿ ನೀಡಲು ತೀರ್ಮಾನಿಸಿದೆ.

ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಕುಟುಂಬಕ್ಕೂ ಸರ್ಕಾರ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ.

ರಾಜ್ಯದ ಪ್ರತಿ ಕುಟುಂಬಕ್ಕೂ ಸರ್ಕಾರ 10 ಸಾವಿರ ಲೀಟರ್ ನೀರು ಕೊಡುವ ಬಗ್ಗೆ ಚಿಂತನೆ ನಡೆಸಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ಜಲ ಜೀವನ್ ಮಿಷನ್ ಹರ್ ಘಲ್ ಜಲ್ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಪ್ರತಿ ತಿಂಗಳಿಗೆ 10,000 ಲೀಟರ್ ಕುಡಿಯುವ ನೀರು ಉಚಿತವಾಗಿ ನೀಡಲು ತೀರ್ಮಾನಿಸಿದ್ದು, ನಂತರ ಹೆಚ್ಚಿನ ನೀರು ಬಳಕೆ ಮಾಡಿದವರಿಗೆ ಸ್ಲ್ಯಾಬ್ ರೀತಿ ಶುಲ್ಕ ವಿಧಿಸಲಾಗುತ್ತದೆ.

ರಾಜ್ಯದ ಜನಸಂಖ್ಯೆ 7 ಕೋಟಿಯಷ್ಟು ಇದ್ದು, ಪ್ರತಿ ಮನೆಗೆ ಅಂದಾಜು 4 ಜನರಂತೆ 1.40 ಕೋಟಿ ಮನೆಗಳಾಗಬಹುದೆಂದು ಅಂದಾಜಿಸಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ನಲ್ಲಿ ಸಂಪರ್ಕಕ್ಕೆ ಮೀಟರ್ ಅಳವಡಿಕೆ ಕಡ್ಡಾಯವಾಗಿದೆ, ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಪ್ರಸ್ತಾವನೆ ಸಿದ್ಧಪಡಿಸಿದ್ದು, ಸಿಎಂ ಜತೆ ಚರ್ಚೆ ನಡೆಸಿ ಮುಂದಿನ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದ್ದಾರೆ . ಯೋಜನೆಯನ್ನು ಮೊದಲಿಗೆ ಪ್ರಕಟಿಸಿ ಮುಂದಿನ ಬಜೆಟ್ನಲ್ಲಿ ಅನುದಾನ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಹತ್ತು ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡುವವರಿಗೆ ಸ್ಲ್ಯಾಬ್ ರೀತಿಯಲ್ಲಿ ಶುಲ್ಕ ವಿಧಿಸುವುದು. ಅದರಲ್ಲಿ ಮೊದಲ ಐದು ಸಾವಿರ ಲೀಟರ್ಗೆ ಒಂದು ಮೊತ್ತವಿದ್ದರೆ, ಐದು ಸಾವಿರ ಲೀಟರ್ ಮೀರಿದ ನಂತರ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಬೆಂಗಳೂರು ಹೊರತುಪಡಿಸಿದರೆ ಉಳಿದ ನಗರ ಮತ್ತು ಗ್ರಾಮೀಣ ಭಾಗಕ್ಕೆ ವಾರ್ಷಿಕ ಅಂದಾಜು 250 ಕೋಟಿ ರೂ.ಗಳಷ್ಟು ಮಾತ್ರ ವೆಚ್ಚ ಆಗಬಹುದೆಂದು ಅಂದಾಜು ಮಾಡಲಾಗಿದೆ.

Leave a Reply

Your email address will not be published. Required fields are marked *