ಜಿಪಂ , ತಾಪಂ ಚುನಾವಣಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನ್ಯಾ.ವಿಕ್ರಮನಾಥ್ ಹಾಗೂ ನ್ಯಾ.ಅನಿರುದ್ದ್ ಬೋಸ್ ನೇತೃತ್ವದ ಪೀಠವು ವಜಾಗೊಳಿಸಿದೆ.ಹೀಗಾಗಿ, ರಾಜ್ಯ ಸರ್ಕಾರದ ಡಿಲಿಮಿಟೇಷನ್‌ ಕಾರ್ಯ ಪೂರ್ಣಗೊಂಡ ನಂತರ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಸೂಚನೆಗಳು ಕಂಡುಬರುತ್ತಿವೆ.ರಾಜ್ಯದಲ್ಲಿ ಸುಮಾರು ಒಂದೂವರೆ ವರ್ಷದಿಂದ ಬಾಕಿ ಇರುವ ಜಿಲ್ಲಾ ಪಂಚಾಯಿತಿ (ZP) ಹಾಗೂ ತಾಲೂಕು ಪಂಚಾಯಿತಿ (TP) ಚುನಾವಣೆ ನಡೆದಿಲ್ಲ. ಇದಕ್ಕೆ ಕಾರಣ ಎರಡೂ ಪಂಚಾಯಿತಿಗಳಲ್ಲಿ ಕ್ಷೇತ್ರಗಳ ಮರುವಿಗಂಡಣೆ (Delimitation) ಮತ್ತು ಮೀಸಲು (Reservation) ನಿಗದಿಗೊಳಿಸುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೀಗಾಗಿ, ಕೆಲವೆಡೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತವೆ. ಆದರೆ, ಈ ಕಾರ್ಯವನ್ನು ಪೂರ್ಣಗೊಳಿಸಲು ಹೈಕೋರ್ಟ್‌ನಿಂದ ರಾಜ್ಯ ಸರ್ಕಾರಕ್ಕೆ ಮತ್ತೆ 12 ವಾರ ಕಾಲಾವಕಾಶ ನೀಡಿತ್ತು. ಈ ಕಾಲಾವಕಾಶ ಪೂರ್ಣಗೊಳ್ಳುವ ಮಜುನ್ನವೇ ಹೈಕೋರ್ಟ್ ನ ಆದೇಶ ಪ್ರಶ್ನಿಸಿಕೊಂಡು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಸಿದ್ದು, ಅದನ್ನು ಶುಕ್ರವಾರ ವಜಾಗೊಳಿಸಿದೆ.

ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ವಾರ್ಡ್‌ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ 12 ವಾರ ಗಡುವು ನೀಡಿರುವ ಹೈಕೋರ್ಟ್‌, ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದ ಒಂದು ವಾರದ ಬಳಿಕ ಚುನಾವಣಾ ನಡೆಸುವ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದ ಹಾಗೂ ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್‌ ರಾಜ್‌ ಮತ್ತು ಗ್ರಾಮ ಸ್ವರಾಜ್‌ ಕಾಯ್ದೆಗೆ ತಿದ್ದುಪಡಿ ತಂದಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಮಂಗಳವಾರ ಅರ್ಜಿ ಕುರಿತು ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಹಾಗೂ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರ ವಾದ-ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರ 12 ವಾರದೊಳಗೆ ಸರ್ಕಾರ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಅದಾದ ಒಂದು ವಾರದೊಳಗೆ ಆಯೋಗ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಆದೇಶಿಸಿತು. ಅಲ್ಲದೆ, ಸರ್ಕಾರ ಮತ್ತೆ ಯಾವುದೇ ಕಾರಣ ನೀಡಿ ಮತ್ತೆ ಸಮಯ ವಿಸ್ತರಣೆಗೆ ಕೋರುವಂತಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟವಾಗಿ ನುಡಿದಿದೆ.

ಇದರೊಂದಿಗೆ ಕಳೆದ ಸುಮಾರು ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಅವಧಿ ಪೂರ್ಣಗೊಂಡಿರುವ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಕಾಲ ಕೂಡಿ ಬಂದಂತಾಗಿದೆ. ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಎಜಿ ಪ್ರಭುಲಿಂಗ ನಾವದಗಿ ಹಾಜರಾಗಿ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ 8 ವಾರಗಳಲ್ಲಿ ಕ್ಷೇತ್ರ ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಹಾಗೂ ಅಧಿಸೂಚನೆ ಪ್ರಕಟಿಸಿದ ಒಂದು ವಾರದೊಳಗೆ ಚುನಾವಣೆ ಪ್ರಕ್ರಿಯೆ ಆರಂಭಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮತ್ತು ಎಲ್ಲ ವರ್ಗಗಳಿಗೆ ಮೀಸಲಾತಿ ನಿರ್ಧರಿಸಲು ಆಯೋಗ ಸರ್ಕಾರ ರಚಿಸಿರುವುದರಿಂದ 12 ವಾರ ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಈ ಮನವಿಗೆ ತೀವ್ರವಾಗಿ ಆಕ್ಷೇಪಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ, ಚುನಾವಣೆ ನಡೆಸಲು ಆಯೋಗ ಎಲ್ಲ ರೀತಿ ಸಜ್ಜಾಗಿತ್ತು. ಆದರೆ ರಾಜ್ಯ ಸರ್ಕಾರ ಪಂಚಾಯತ್‌ ಕಾಯ್ದೆಗೆ ತಿದ್ದುಪಡಿ ತಂದು, ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಆಯೋಗದಿಂದ ಕಿತ್ತುಕೊಂಡ ಕಾರಣದಿಂದಲೇ ಚುನಾವಣೆ ವಿಳಂಬವಾಗಿರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ನೀಡಬಾರದು ಎಂದು ಕೋರಿದರು.

ಆಗ ಸರ್ಕಾರವನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರ ಸುಪ್ರೀಂಕೋರ್ಟ್‌ ಆದೇಶದಂತೆ ವೇಳಾಪಟ್ಟಿ ಪಾಲನೆ ಮಾಡಿ, ಚುನಾವಣೆ ನಡೆಸಿ, ಚುನಾವಣೆ ನಡೆಸಲು ಆಯೋಗಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಕಲ್ಪಿಸಬೇಕು ಎಂದು ಮೌಖಿಕವಾಗಿ ಸೂಚಿಸಿದರು.

ಇದಕ್ಕೆ ಅಡ್ವೋಕೇಟ್‌ ಜನರಲ್‌ ಉತ್ತರಿಸಿ, ಬಿಬಿಎಂಪಿ ಚುನಾವಣೆ ಬೆಂಗಳೂರಿಗಷ್ಟೇ ಸೀಮಿತವಾಗಿದೆ. ರಾಜ್ಯದ 138 ತಾ.ಪಂ. ಹಾಗೂ 34 ಜಿ.ಪಂ. ಕ್ಷೇತ್ರಗಳಿಗೆ ಮೀಸಲಾತಿ ಕಲ್ಪಿಸುವುದು ದೊಡ್ಡ ಹಾಗೂ ಕ್ಲಿಷ್ಟಕರವಾದ ಪ್ರಕ್ರಿಯೆ. ಆದ್ದರಿಂದ ಸರ್ಕಾರ ಹೆಚ್ಚಿನ ಕಾಲಾವಕಾಶ ಕೋರುತ್ತಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು

ಕೊನೆಗೆ ಆಯೋಗದ ಪರ ವಕೀಲರು ಪ್ರತಿಕ್ರಿಯಿಸಿ, ಇಂದಿನಿಂದ 12 ವಾರಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಬೇಕು. ಸರ್ಕಾರಕ್ಕೆ ಮತ್ತೆ ಕಾಲಾವಕಾಶ ವಿಸ್ತರಿಸಬಾರದು. ಈ ಕುರಿತು ಸರ್ಕಾರಕ್ಕೆ ನ್ಯಾಯಪೀಠ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಕೋರಿದರು. ಸರ್ಕಾರ ಮತ್ತು ಚುನಾವಣಾ ಆಯೋಗದ ಮನವಿ ಒಪ್ಪಿದ ನ್ಯಾಯಪೀಠ ಈ ಆದೇಶ ಮಾಡಿ ಅರ್ಜಿ ವಿಚಾರಣೆ ಮುಂದೂಡಿತು.

ಹಿನ್ನೆಲೆ :

ಅವಧಿ ಪೂರ್ಣಗೊಂಡಿರುವ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಸಬೇಕು ಎಂದು ಮೇ 11ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಮೇ 12ರಂದು ಚುನಾವಣಾ ಆಯೋಗ ಹೈಕೋರ್ಟ್‌ಗೆ ಮೆಮೋ ಸಲ್ಲಿಸಿ, ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಸಂಬಂಧ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿತ್ತು.

Leave a Reply

Your email address will not be published. Required fields are marked *