ಗ್ರಾಮೀಣ ಜನತೆಗೆ ಬಿಗ್ ಶಾಕ್ : ಮನೆ ಕಂದಾಯ ಏರಿಕೆ , ಹಲವು ಉಪಕರಗಳ ಹೊರೆ

ಪಂಚಾಯತ್ ರಾಜ್ ಇಲಾಖೆಯಿಂದ ಹೊರಡಿಸಲಾದ ಅಧಿಸೂಚನೆ ಪ್ರಕಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸ್ಥಿರಾಸ್ತಿ ಮಾರ್ಗಸೂಚಿ ದರ ಆಧರಿಸಿ ಮತ್ತು ಬಂಡವಾಳದ ಮೇಲೆ ತೆರಿಗೆ ನಿಗದಿ ಮಾಡಲಾಗುತ್ತಿದ್ದು, ಕಂದಾಯ ಒಂದರಿಂದ ಮೂರು ಸಾವಿರ ರೂಪಾಯಿವರೆಗೆ ಹೆಚ್ಚಳವಾಗಿದೆ.

ಗ್ರಾಮೀಣ ಭಾಗದಲ್ಲಿ ಕಂದಾಯಕ್ಕೆ ಸರ್ಕಾರದಿಂದ ರೂಪಿಸಲಾದ ಹೊಸ ನಿಯಮ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

ಈ ಹಿಂದೆ ನೂರಾರು ರೂಪಾಯಿ ಕಂದಾಯ ಪಾವತಿಸುತ್ತಿದ್ದವರು ಈಗ ಸಾವಿರಾರು ರೂಪಾಯಿ ಕಂದಾಯ ಕಟ್ಟುವಂತಾಗಿದೆ. ಇದರೊಂದಿಗೆ ಹಲವು ಉಪ ಕರಗಳನ್ನು ಸೇರ್ಪಡೆ ಮಾಡಿ ಕಂದಾಯ ನಿಗದಿ ಮಾಡಲಾಗಿದೆ.

ಈ ಹಿಂದೆ ಗ್ರಾಮಸಭೆಗಳಲ್ಲಿ ಗ್ರಾಮದ ಸ್ಥಿತಿಗತಿ ಆಧರಿಸಿ ಮನೆ, ಖಾಲ ನಿವೇಶನದಿಂದ ಬರುವ ಆದಾಯದ ಮೇಲೆ 300 ರೂ. ನಿಂದ 1000 ರೂ.ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಚುನಾಯಿತ ಪ್ರತಿನಿಧಿಗಳು ತೆರಿಗೆ ನಿಗದಿ ಮಾಡುವ ಅಧಿಕಾರ ಹೊಂದಿದ್ದರು.

ಆದರೆ, ಈಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸ್ಥಿರಾಸ್ತಿ ಮಾರ್ಗಸೂಚಿ ದರ ಆಧರಿಸಿ ತೆರಿಗೆ ನಿಗದಿ ಮಾಡಲಾಗುತ್ತಿದೆ. ಇದರೊಂದಿಗೆ ಪಂಚತಂತ್ರ 2.0 ತಂತ್ರಾಂಶದಲ್ಲಿ ಸೃಷ್ಟಿಸುವ ಕಂದಾಯ ರಶೀದಿಯಲ್ಲಿ ಭೂಮಿಯ ಮೇಲಿನ ತೆರಿಗೆ, ಭಿಕ್ಷುಕರ ಉಪಕರ, ಗ್ರಂಥಾಲಯ ಕರ, ಆರೋಗ್ಯ ಕರ ಕೂಡ ವಸೂಲಿ ಮಾಡಲಾಗುತ್ತಿದೆ. ಗ್ರಾಮೀಣ ಜನರು ಏಕೆ ಭಿಕ್ಷುಕರ ಸೆಸ್ ಪಾವತಿಸಬೇಕು. ಈ ರೀತಿ ಅನಗತ್ಯ ತೆರಿಗೆ ತೆಗೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ. ಗ್ರಾಮೀಣ ಭಾಗದಲ್ಲಿ ತೆರಿಗೆ ಏರಿಕೆ ಆಗಿದೆ. ನಗರಗಳಿಗೆ ಸಮೀಪ ಇರುವ, ನಗರಕ್ಕೆ ಹೊಂದಿಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಗ್ರಾಮಗಳಿಗೆ ತೆರಿಗೆ ಹೆಚ್ಚಾಗಿದೆ. ನಗರ ಪ್ರದೇಶದಿಂದ ದೂರ ಇರುವ ಗ್ರಾಮಗಳಲ್ಲಿ ಮಾರ್ಗಸೂಚಿ ದರ ಕಡಿಮೆ ಇದೆ. ಅಲ್ಲಿ ತೆರಿಗೆ ಕೂಡ ಕಡಿಮೆ ಇದೆ.

ಹಿಂದೆ ಆರ್‌ಸಿಸಿ ಕಟ್ಟಡ ಮತ್ತು ಗುಡಿಸಲಿಗೆ ಒಂದೇ ರೀತಿಯ ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಗುಡಿಸಲಿನಲ್ಲಿ ವಾಸವಾಗಿರುವವರು ಬೀದಿ ನಲ್ಲಿ ನೀರು ಹಿಡಿದರೂ ಸಮಾನ ತೆರಿಗೆ ಪಾವತಿಸಬೇಕಿತ್ತು. ಇದನ್ನು ತಪ್ಪಿಸಿ ಮಾರ್ಗಸೂಚಿ ದರ ಮತ್ತು ಬಂಡವಾಳ ಹೂಡಿಕೆ ಆಧಾರದ ಮೇಲೆ ತೆರಿಗೆ ನಿಗದಿ ಮಾಡಿರುವುದು ವೈಜ್ಞಾನಿಕ ತೆರಿಗೆ ವಿಧಾನವೆಂದು ಹೇಳಲಾಗಿದೆ. ಆದರೆ, ಮಾರ್ಗಸೂಚಿ ದರದ ಆಧಾರದಲ್ಲಿ ಕಂದಾಯ ಸಂಗ್ರಹ ಮತ್ತು ಸೆಸ್ ವಿಧಿಸಿರುವುದರಿಂದ ಹಳ್ಳಿಗಳಲ್ಲಿ ಮನೆ ಕಂದಾಯ ಹೊರೆಯಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.

Leave a Reply

Your email address will not be published. Required fields are marked *