ಗದಗ : ಕೆಎಸ್‌ಆರ್‌ಟಿಸಿ ಟಿಕೆಟ್‌ನಲ್ಲಿ ಜೈ ಮಹಾರಾಷ್ಟ್ರ ಬರಹ !

ಗದಗ, ಅಕ್ಟೋಬರ್ 05; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಟಿಕೆಟ್‌ನಲ್ಲಿ ಜೈ ಮಹಾರಾಷ್ಟ್ರ ಎಂಬ ಮುದ್ರಣ ಕಂಡು ಜನರು ಆಕ್ರೋಶಗೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಕೆಎಸ್‌ಆರ್​ಟಿಸಿ ಟಿಕೆಟ್ ಮೇಲಿನ ಬರಹದಲ್ಲಿ ಯಡವಟ್ಟು ಮಾಡಿಕೊಂಡಿದೆ.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಟಿಕೆಟ್‌ನಲ್ಲಿ ಮಹಾರಾಷ್ಟ್ರ ಪರವಾದ ಮುದ್ರಣ ಕಂಡು ಬಂದಿದೆ.ಜೈ ಮಹಾರಾಷ್ಟ್ರ, ಮಹಾರಾಷ್ಟ್ರ ರಾಜ್ಯ ಪರಿವಾಹನ ಎಂದು ಟಿಕೆಟ್‌ನಲ್ಲಿ ಮುದ್ರಿಸಲಾಗಿದೆ.

ಟಿಕೆಟ್ ನೋಡಿದ ಪ್ರಯಾಣಿಕರು ರಸ್ತೆ ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದರು.ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಬಸ್‌ನ ಟಿಕೆಟ್ ಮೇಲೆ ವಾ. ಕ. ರ. ಸಾ. ಸಂಸ್ಥೆ ಗದಗ ಘಟಕ ಎಂದು ಮುದ್ರಿಸಲಾಗಿದೆ. ಇದೇ ಟಿಕೆಟ್‌ನಲ್ಲಿ ಮಹಾರಾಷ್ಟ್ರ ಪರವಾದ ಬರಹ ಪತ್ತೆಯಾಗಿದೆ.

ಬಸ್ ಟಿಕೆಟ್‌ನ ಮಧ್ಯಭಾಗದಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ ಎಂದು ಮುದ್ರಿಸಲಾಗಿದೆ. ತಪ್ಪಾಗಿ ಮುದ್ರಣವಾಗಲು ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಜೈ ಮಹಾರಾಷ್ಟ್ರ ಬರಹ ಇರುವ ಟಿಕೆಟ್ ವಿತರಣೆ ಮಾಡುತ್ತಿರುವುದಕ್ಕೆ ಜನರು ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳು ಟಿಕೆಟ್ ಮುದ್ರಣಗೊಂಡ ಬಳಿಕ ಅದನ್ನು ಪರಿಶೀಲನೆ ನಡೆಸದೇ ಸಿಬ್ಬಂದಿಗಳಿಗೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್‌ನಲ್ಲಿ ರಾಜ್ಯದ ಲಾಂಛನವಾಗಿರುವ ಗಂಡಭೇರುಂಡ ಇರುತ್ತದೆ. ಆದರೆ ಗದಗದಲ್ಲಿ ನೀಡುತ್ತಿರುವ ಟಿಕೆಟ್ ಲಾಂಛನ ಇರುತ್ತದೆ. ಆದರೆ ಗದಗ ವಿಭಾಗದಿಂದ ನೀಡುತ್ತಿರುವ ಟಿಕೆಟ್‌ನಲ್ಲಿ ಮಾತ್ರ ಮಹಾರಾಷ್ಟ್ರ ಜೈ ಎಂದು ಇರುವ ಟಿಕೆಟ್ ಹಂಚಿಕೆಯಾಗಿದೆ. ಕೆಲವು ಬಸ್‌ಗಳಲ್ಲಿ ಮಾತ್ರ ಇಂತಹ ಟಿಕೆಟ್ ಹಂಚಿಕೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಕನ್ನಡಪರ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸಿದವು. ಗದಗ ನಗರದ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ, ಯಡವಟ್ಟು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *