ಗದಗದ ಅಭಿಮಾನಿಯ ಮಗುವಿಗೆ ‘ ಪುನೀತ್ ರಾಜ್‌ಕುಮಾರ್ ‘ ಎಂದು ನಾಮಕರಣ ಮಾಡಿದ ರಾಘಣ್ಣ !

ಗದಗ : ಅಪ್ಪು ಅಗಲಿ ಸಾಕಷ್ಟು ತಿಂಗಳುಗಳೇ ಕಳೆದರು ಆ ನೋವು ಮಾತ್ರ ಕೊಂಚವು ಕಮ್ಮಿಯಾಗಿಲ್ಲ. ನಿತ್ಯ ಅಭಿಮಾನಿಗಳು ಅಪ್ಪು ಅವರನ್ನು ಮನೆ, ಮನಗಳಲ್ಲಿ ಪೂಜಿಸುತ್ತಲೇ ಇದ್ದಾರೆ. ಅಂತೆಯೇ ಅವರ 10ನೇ ತಿಂಗಳಿನ ಪುಣ್ಯಸ್ಮರಣೆ ನಿಮಿತ್ತ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದೇ ದಿನ ಗದಗದ ಅಪ್ಪು ಅಭಿಮಾನಿ ದಂಪತಿ ತಮ್ಮ ಮಗುವಿಗೆ ಪುನೀತ್ ರಾಜ್‌ಕುಮಾರ್ ಎಂದು ನಾಮಕರಣ ಮಾಡಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ಅಪ್ಪು ಪುಣ್ಯಸ್ಮರಣೆ ದಿನದಂದೇ ಗದಗ ಜಿಲ್ಲೆಯ ನರಗುಂದದಿಂದ ದಂಪತಿಗಳು ಭೇಟಿ ನೀಡಿದ್ದರು. ನಾವು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು. ನಮ್ಮ ಮಗನಿಗೆ ಅಪ್ಪು ಸ್ಮರಣಾರ್ಥವಾಗಿ ಪುನೀತ್ ರಾಜ್‌ಕುಮಾರ್ ಎಂದು ಹೆಸರಿಡಲು ಕೋರಿದ್ದಾರೆ. ಇದಕ್ಕೆ ಒಪ್ಪಿದ ರಾಘಣ್ಣ 22 ದಿನಗಳ ಪುಟ್ಟ ಕಂದನ ಕಿವಿಯಲ್ಲಿ ‘ಪುನೀತ್ ರಾಜ್‌ಕುಮಾರ್’ ಹೆಸರು ಹೇಳಿ ನಾಮಕರಣ ಮಾಡಿದ್ದಾರೆ. ಜೊತೆಗೆ ಇದರ ವಿಡಿಯೋವನ್ನು ರಾಘವೇಂದ್ರ ರಾಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯ ನಿವಾಸಿಯಾದ ಮಾರುತಿ ಬೆಳವಣಿಕಿ ಮತ್ತು ಸಂಗೀತ ದಂಪತಿಗೆ ಗಂಡು ಮಗು ಜನನವಾಗಿತ್ತು. ದಂಪತಿಗೆ ತಮ್ಮ ಮಗುವಿಗೆ ಅಪ್ಪು ಅಂತ ನಾಮಕರಣ ಮಾಡಬೇಕು ಎನ್ನುವ ಹಂಬಲ ಇತ್ತು. ಬೆಂಗಳೂರಿನ ಅಪ್ಪು ಅವರ ಮನೆಯಲ್ಲಿಯೇ ನಮ್ಮ ಮಗುವಿನ ನಾಮಕರಣ ಮಾಡಬೇಕು. ಶಿವರಾಜ್‌ಕುಮಾರ್ ಅಥವಾ ರಾಘಣ್ಣ ಯಾರಾದರೂ ಒಬ್ಬರು ನಮ್ಮ ಮಗುವಿಗೆ ಅಪ್ಪು ಎಂದು ಹೆಸರಿಡಬೇಕು ಎನ್ನುವ ಹಂಬಲ ಅವರದ್ದಾಗಿತ್ತು. ಕೊನೆಗೂ ಅವರ ಆಸೆ ಈಗ ಈಡೇರಿದೆ.

ಮಾರುತಿ ಬೆಳವಣಿಕಿ ನರಗುಂದದಲ್ಲಿ ಅಪ್ಪು ಅಂತಾನೆ ಪ್ರಸಿದ್ಧಿ ಆಗಿದ್ದಾರೆ. ಮಾರುತಿಗೆ ಅಪ್ಪು ಅಂದರೆ ಅಪಾರ ಪ್ರೀತಿ. ಚಿಕ್ಕಂದಿನಿಂದಲೂ ಇವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಪುನೀತ್ ಅವರ ಚಿತ್ರಗಳು ಬಿಡುಗಡೆಯಾದರೆ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದರು. ಅಪ್ಪು ಅವರ ಅಗಲಿಕೆಯಿಂದ ಮಾರುತಿ ಬಹಳಷ್ಟು ನೊಂದುಕೊಂಡಿದ್ದರು. ಇದೀಗ ರಾಘಣ್ಣ ತಮ್ಮ ಮಗುವಿಗೆ ಪುನೀತ್ ರಾಜ್‌ಕುಮಾರ್ ಎಂದು ನಾಮಕರಣ ಮಾಡಿರುವುದು ಸಂತಸ ತಂದಿದೆ.

Leave a Reply

Your email address will not be published. Required fields are marked *