ಪವಾಡ ಪುರುಷ ಗೋಣಿಬಸವೇಶ್ವರ ರಥೋತ್ಸವ ಇಂದು

ಅಡವಿಸೋಮಾಪೂರ : ಗ್ರಾಮದ ಆರಾಧ್ಯ ದೈವ ಗೋಣಿ ಬಸವೇಶ್ವರನಿಗೆ ಶ್ರಾವಣ ಮಾಸದಲ್ಲಿ ನಿತ್ಯ ಪೂಜೆ ಶ್ರಾವಣ ಕಡೆ ಸೋಮವಾರ ಜಾತ್ರಾ ಮಹೋತ್ಸವ ನಡೆಯಲಿದೆ.

ಪವಿತ್ರ ಶ್ರಾವಣ ಮಾಸದ ಕೊನೆ ಸೋಮವಾರ ಆ.22 ರಂದು ತಾಲೂಕಿನ ಸುಕ್ಷೇತ್ರ ಅಡವಿಸೋಮಾಪೂರ ಗೋಣೆ ಬಸವೇಶ್ವರ ದೇವಸ್ಥಾನದಲ್ಲಿ ಬೆ.6 ರಿಂದ 8 ರವರೆಗೆ ಮಹಾ ಅಭಿಷೇಕ, ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವ ದೊಂದಿಗೆ ಮಹಾರಥೋತ್ಸವ ಜರುಗಲಿದೆ.

ಇತಿಹಾಸ

ಗೋಣಿ ಬಸವ ಜನನ : ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿಯಲ್ಲಿ ಜನಿಸಿ ಭಕ್ತಿ ಮಾರ್ಗದಿಂದ ಜನರಿಗೆ ಧರ್ಮ ಬೋಧನೆ ದೇವರಲ್ಲಿ ನಂಬಿಕೆಯುಳ್ಳವರಾಗಿ ಬಾಳುವಂತೆ ಪ್ರೇರೆಪಿಸಿ ಅವರಿಗೆಲ್ಲ ಧನ, ಧಾನ್ಯ, ಸಮೃದ್ಧಿಯಾಗಿ ದೊರಕುವಂತೆ ಮಾಡಿ ಬಾಳಲು ಗೋಣಿ ಬಸವಣ್ಣನಿಗೆ ಶಿವಪಾರ್ವತಿ ಆಶೀರ್ವದಿಸಿದರು ಎಂಬ ಪ್ರತೀತಿ ಇದೆ.

ಗೋಣಿಬಸವೇಶ್ವರ ಜನಪ್ರಿಯತೆ ಸಹಿಸದ ಚಿಗಟೇರಿ ಶಿವನಯ್ಯ ಎಂಬ ಸಾಮಂತ ದೊರೆ ಗೋಣಿಬಸವೇಶ್ವರರನ್ನು ಸುಣ್ಣದ ಗೋಣಿಚೀಲದಲ್ಲಿ ಸುತ್ತಿ ಹರಪನಹಳ್ಳಿ ಪಟ್ಟಣದಲ್ಲಿರುವ ಅಯ್ಯನಕೆರೆಗೆ ಎಸೆಯುವಂತೆ ಆದೇಶ ನೀಡಿದ್ದನು. ಹೀಗೆ ಕೆರೆಯಲ್ಲಿ ಎಸೆಯಲಾಗಿದ್ದ ಸುಣ್ಣದ ಚೀಲವನ್ನು ಬಗೆದು ಅವತಾರ ಪುರುಷನಾಗಿ ಎದ್ದು ಬಂದ ಹಿನ್ನೆಲೆಯಲ್ಲಿ ಗೋಣಿಬಸವೇಶ್ವರ ಜನಮಾಸನದಲ್ಲಿ ನೆಲೆಯೂರಿದರು ಎಂಬ ನಂಬಿಕೆ ಇದೆ.

ಭೂಲೋಕದ ಪ್ರಜೆಗಳ ಕಷ್ಟ ಪರಿಹರಿಸುವ ಮಹಾ ಪುರುಷ ಇವನಾಗುವನು. ಇವನು ಗೋಣಿ ಚೀಲದಲ್ಲಿ ಸಿಕ್ಕಿದ್ದರಿಂದ ಗೋಣಿ ಬಸವನೆಂದು ನಾಮಕರಣ ಮಾಡಿದರು.

ಪವಾಡಗಳ ಪುರುಷ:

ಪಂಚಾಗಣಾಧೀಶ್ವರರಲ್ಲಿ ಮದ್ದಾನೇಶ್ವರ ಮಾತ್ರ ಶರಣೆ ಕನಕಾಂಬಿಕೆಯನ್ನು ವರಿಸುವ ಮೂಲಕ ಸಾಂಸಾರಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಮದ್ದಾನೇಶ್ವರ ಮತ್ತು ಕನಕಾಂಬಿಕೆ ಮಗನಾಗಿ ಜನಿಸಿದ ಗೋಣಿಬಸವೇಶ್ವರ ಲೋಕ ಕಲ್ಯಾಣಕ್ಕೆ 14-15ನೇ ಶತಮಾನದ ಮಧ್ಯ ಭಾಗದಲ್ಲಿ ಧರ್ಮ, ಭಕ್ತಿಯ ಜ್ಯೋತಿ ಬೆಳಗಿದ್ದಾರೆ.

ಮನುಕುಲದ ಕಲ್ಯಾಣಕ್ಕಾಗಿ ಆಚಾರ-ವಿಚಾರ, ಸಂಸ್ಕೃತಿಗಳ ಪರಿಕಲ್ಪನೆಯಲ್ಲಿ ಧರ್ಮ ಜಾಗೃತಿ ಮೂಡಿಸಿದ ಪುರುಷರಲ್ಲಿ ಕೂಲಹಳ್ಳಿ ಗೋಣಿಬಸವೇಶ್ವರರು ಪ್ರಮುಖರಾಗಿದ್ದಾರೆ. ಚಿಕ್ಕನಹಳ್ಳಿಯಲ್ಲಿ ಗೋಣಿಬಸವೇಶ್ವರರು ವ್ಯವಸಾಯದಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಗಮಿಸಿದ ಜೋಡಿ ಹುಲಿಗಳನ್ನೇ ಎತ್ತುಗಳ ರೀತಿ ವ್ಯವಸಾಯ ಚಟುವಟಿಕೆಗೆ ಬಳಸಿಕೊಂಡಿದ್ದಾರೆ. ಅಳಿಲು ಚರ್ಮವನ್ನೇ ತೆಪ್ಪ ಮಾಡಿಕೊಂಡು, ಕೈಯಲ್ಲಿನ ಬೆತ್ತವನ್ನೇ ಹರಿಗೋಲು ಮಾಡಿಕೊಂಡು ರಭಸವಾಗಿ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನು ದಾಟಿದ ಪವಾಡ ಮಾಡಿರುವ ಪ್ರತೀತಿ ಇದೆ.

ಗೋಣಿ ಬಸವಣ್ಣ ನಾಡಿನ ತುಂಬಾ ಸಂಚರಿಸಿ ಪವಾಡ ತೋರಿಸಿ 777 ಮಠ ಸ್ಥಾಪಿಸಿದರು. ಅಲ್ಲದೇ ಪಂಚಗಣಾಧೀಶ್ವರರ ಮಠಗಳು ಪ್ರಸಿದ್ಧವಾಗಿವೆ.

ಬೆಟ್ಟದ ಮಲ್ಲೇಶ್ವರ, ಬಾಗಲಿ ಕಲ್ಮೇಶ್ವರ, ಕೊಟ್ಟೂರು ಕೊಟ್ಟೂರೇಶ್ವರ, ಕೋಲು ಶಾಂತೇಶ್ವರ, ಹಾಗೂ ಮದ್ದಾನೇಶ್ವರ ಮಠಗಳು ಗೋಚರಿಸಿ ಇಂದಿಗೂ ಜಾತ್ರೆ ಉತ್ಸವಗಳು ನಡೆಯುತ್ತವೆ. ಕೂಲಹಳ್ಳಿ ಗೋಣಿ ಬಸವಣ್ಣನ ಮೂಲ ಮಠವಾದರೆ ಗದಗ ಜಿಲ್ಲೆಯ ಗುಮ್ಮಗೋಳ, ವೆಂಕಟಾಪುರ, ಕುರ್ತುಕೋಟಿ ಅಲ್ಲದೇ ಇನ್ನೂ ಮುಂತಾದ ಗ್ರಾಮಗಳಲ್ಲಿ ಶಾಖಾಮಠ, ಅಡವಿಸೋಮಾಪೂರ ದೇವಸ್ಥಾನಗಳು ಇರುವುದು ಸಾಕ್ಷಿಯಾಗಿವೆ.

ಶ್ರಾವಣ ಮಾಸದ ಕೊನೆಯ ಸೋಮವಾರ ಜರುಗುವ ಗೋಣಿ ಬಸವೇಶ್ವರ ಜಾತ್ರಾ ಮಹೋತ್ಸದ ಮುನ್ನ ಗ್ರಾಮದಿಂದ ಕೂಲಹಳ್ಳಿಗೆ ತೆರಳಿ ದೀಪ ಹಚ್ಚಿ ಬಂದ ನಂತರ ರಥೋತ್ಸವದ ಕಾರ್ಯಕ್ರಮಗಳು ಆರಂಭವಾಗುವುದು.

Leave a Reply

Your email address will not be published. Required fields are marked *